September 23, 2026
Wednesday, September 23, 2026
spot_img

‘ಕಲ್ಕಿ’ಗೆ ರಾಷ್ಟ್ರ ಪ್ರಶಸ್ತಿಯ ಮುಕುಟ: ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ನಾಗ್ ಅಶ್ವಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಪ್ರೇಕ್ಷಕರನ್ನು ಹೊಸದೊಂದು ಕಾಲ್ಪನಿಕ ಹಾಗೂ ಪೌರಾಣಿಕ ಪ್ರಪಂಚಕ್ಕೆ ಕರೆದೊಯ್ದು ಸೈ ಎನಿಸಿಕೊಂಡಿದ್ದ ‘ಕಲ್ಕಿ 2898 AD’ ಸಿನಿಮಾ ಈಗ ಭಾರತದ ಅತ್ಯುನ್ನತ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಯ ಗೌರವಕ್ಕೆ ಭಾಜನವಾಗಿದೆ. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಹಾಗೂ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ವಿಭಾಗಗಳಲ್ಲಿ ‘ಕಲ್ಕಿ’ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಅದ್ಭುತ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡಿರುವ ನಿರ್ದೇಶಕ ನಾಗ್ ಅಶ್ವಿನ್, ಈ ಗೌರವ ತಮಗೆ ಅತ್ಯಂತ ವಿಶೇಷವಾದದ್ದು ಎಂದು ಹೇಳಿದ್ದಾರೆ. ‘ಮಹಾನಟಿ’ ಚಿತ್ರದ ಬಳಿಕ ನಾಗ್ ಅಶ್ವಿನ್ ಅವರಿಗೆ ಸಿಗುತ್ತಿರುವ ಎರಡನೇ ರಾಷ್ಟ್ರ ಪ್ರಶಸ್ತಿ ಇದಾಗಿದೆ.

ಪ್ರಶಸ್ತಿ ಬಂದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದ ನಾಗ್ ಅಶ್ವಿನ್, “ಸಾಮಾನ್ಯವಾಗಿ ನಾನು ಸಿನಿಮಾ ಮಾಡುವಾಗ ಯಾವುದೇ ಪ್ರಶಸ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವುದಿಲ್ಲ. ಆದರೆ ‘ಕಲ್ಕಿ’ ವಿಷಯದಲ್ಲಿ, ಇದರ ‘ಪ್ರೊಡಕ್ಷನ್ ಡಿಸೈನ್’ಗೆ ಖಂಡಿತ ಪ್ರಶಸ್ತಿ ಬರಲೇಬೇಕು ಎಂಬ ಬಲವಾದ ನಂಬಿಕೆ ನನಗಿತ್ತು. ಏಕೆಂದರೆ ಈ ಸಿನಿಮಾಗಾಗಿ ನಾವು ತಾಂತ್ರಿಕವಾಗಿ ಅತ್ಯಂತ ಕಷ್ಟಕರವಾದ ಹಾಗೂ ಅಸಾಧ್ಯ ಎನಿಸುವಂತಹ ಕೆಲಸಗಳನ್ನು ಮಾಡಿದ್ದೆವು. ಇಂದು ಆ ಶ್ರಮಕ್ಕೆ ತಕ್ಕ ಗೌರವ ಸಿಕ್ಕಿರುವುದು ನನಗೆ ತೀವ್ರ ಸಂತಸ ತಂದಿದೆ,” ಎಂದಿದ್ದಾರೆ. ಪ್ರಶಸ್ತಿ ಘೋಷಣೆಯಾದಾಗ ಇಡೀ ಚಿತ್ರತಂಡ ಬೇರೆ ಬೇರೆ ಸ್ಥಳಗಳಲ್ಲಿದ್ದರೂ, ಪ್ರತಿಯೊಬ್ಬರ ಮನದಲ್ಲೂ ಹೃತೂರ್ವಕ ಕೃತಜ್ಞತೆ ಮತ್ತು ಆನಂದವಿತ್ತು ಎಂದು ಅವರು ತಿಳಿಸಿದ್ದಾರೆ.

ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಅವರಂತಹ ದಿಗ್ಗಜ ನಟರನ್ನಿಟ್ಟುಕೊಂಡು ಕೆಲಸ ಮಾಡಿದ್ದು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದಿದ್ದಾರೆ ನಿರ್ದೇಶಕರು. “ದೊಡ್ಡ ನಟರಿದ್ದಾರೆಂದು ಕಥೆಯನ್ನು ಮರೆತು ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಅಭಿನಯಕ್ಕೆ ತಕ್ಕಂತೆ ಪ್ರತಿಯೊಂದು ಸನ್ನಿವೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶಾರ್ಪ್ ಆಗಿ ಮೂಡಿಸಲು ನಾನು ಹೆಜ್ಜೆ ಹೆಜ್ಜೆಗೂ ಜಾಗರೂಕನಾಗಿದ್ದೆ,” ಎಂದು ವಿವರಿಸಿದ್ದಾರೆ.

‘ಕಲ್ಕಿ’ ತಂದಿಟ್ಟ ಯಶಸ್ಸು ಇಂದು ಅನೇಕ ಭಾರತೀಯ ನಿರ್ದೇಶಕರು ಸೈನ್ಸ್ ಫಿಕ್ಷನ್ ಮತ್ತು ಪೌರಾಣಿಕ ಕಥೆಗಳತ್ತ ಮುಖ ಮಾಡುವಂತೆ ಮಾಡಿದೆ. ಈ ಬದಲಾವಣೆಯನ್ನು ಸ್ವಾಗತಿಸಿದ ನಾಗ್ ಅಶ್ವಿನ್, “ಏಳು ವರುಷಗಳ ಹಿಂದೆ ನಾನು ಬರೆದ ಕಥೆ ಇಂದು ಮರುಚಿಂತನೆಗೆ ಒಳಪಡುವ ಅಗತ್ಯವಿದೆ. ಏಕೆಂದರೆ ಈ ಜಾನರ್ ಈಗ ಸಾಕಷ್ಟು ಬೆಳೆದಿದೆ, ಹಾಗಾಗಿ ‘ಕಲ್ಕಿ 2’ ಭಾಗಕ್ಕೆ ಕೆಲವು ಹೊಸ ವಿಷಯಗಳನ್ನು ಮರುರೂಪಿಸಬೇಕಾಗಿದೆ,” ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !