ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾ ವ್ಯಾಪ್ತಿಯ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಬುಧವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಇದರಿಂದಾಗಿ ಸುಖ ನಿದಿರೆಯಲ್ಲಿದ್ದ ಒಂಬತ್ತು ಮಂದಿ ಸಜೀವ ದಹನವಾಗಿದ್ದಾರೆ.
ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾ ಕಡೆಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಕ್ಷಣದಲ್ಲೇ ಬೆಂಕಿ ಇಡೀ ಬಸ್ನ್ನು ಆವರಿಸಿದೆ. ಇದರಿಂದಾಗಿ ಒಂಬತ್ತು ಮಂದಿ ಸಜೀವ ದಹನವಾಗಿದ್ದಾರೆ. ಹಲವು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ.
ಬಿಹಾರ ನೋಂದಣಿ ಸಂಖ್ಯೆಯ (BR32 PA8647) ‘ರಾಜ್ ಕಲ್ಪನಾ ಟ್ರಾವೆಲ್ಸ್’ಗೆ ಸೇರಿದ ಈ ಬಸ್ನಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗ್ರೇಟರ್ ನೋಯ್ಡಾದಿಂದ ಆಗ್ರಾ ಮಾರ್ಗವಾಗಿ ಸಾಗುತ್ತಿದ್ದಾಗ, ದಯಾನತ್ಪುರ ಗ್ರಾಮದ ಬಳಿ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಎಕ್ಸ್ಪ್ರೆಸ್ವೇ ಬದಿಗೆ ನಿಲ್ಲಿಸಿದ್ದಾರೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಹೊಗೆ ಮತ್ತು ಬೆಂಕಿ ಇಡೀ ಬಸ್ಸನ್ನು ಆವರಿಸಿದ್ದರಿಂದ ಒಳಗೆ ಕುಳಿತಿದ್ದ ಪ್ರಯಾಣಿಕರಲ್ಲಿ ಭಾರಿ ಭೀತಿ ಸೃಷ್ಟಿಯಾಯಿತು. ಪ್ರಾಣ ಉಳಿಸಿಕೊಳ್ಳಲು ಜನ ಕಿಟಕಿಯಿಂದ ಹಾರಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಹಾಗೂ ಇಳಿಯಲು ಸಾಧ್ಯವಾಗದ ಮಹಿಳೆಯರು, ವೃದ್ಧರು, ವಿಶೇಷ ಚೇತನ ಮಕ್ಕಳು ಮೃತಪಟ್ಟಿದ್ದಾರೆ.
ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ನಿರಂತರವಾಗಿ ಪಟಾಕಿ ಸಿಡಿಯುವಂತಹ ದೊಡ್ಡ ಸದ್ದುಗಳು ಕೇಳಿಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ, ಬಸ್ಸಿನ ಲಗೇಜ್ ವಿಭಾಗದಲ್ಲಿ ಅನುಮತಿಯಿಲ್ಲದೆ ಅಕ್ರಮವಾಗಿ ಪಟಾಕಿ ಅಥವಾ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತೇ ಎಂಬ ಗಂಭೀರ ಸಂಶಯ ವ್ಯಕ್ತವಾಗಿದೆ. ಈ ಕುರಿತು ವಿಧಿವಿಜ್ಞಾನ ತಂಡ ತನಿಖೆ ಆರಂಭಿಸಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.



