ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ನಗರಿ ಮಂಗಳೂರಿನಲ್ಲಿ ಬೆಚ್ಚಿಬೀಳಿಸುವ ರಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅಪಹರಿಸಿ, ರೂಮ್ ನಲ್ಲಿ ಕೂಡಿಹಾಕಿ ಅತ್ಯಂತ ಅಮಾನವೀಯವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಒಂಬತ್ತು ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೇರಳದ ಚಾವಕ್ಕಾಡ್ ನಿವಾಸಿ, ಅಮೀರ್ ಅಲಿ ನೀಡಿದ ದೂರಿನ ಆಧಾರದ ಮೇಲೆ ನಸೀದ್ ಅಮೀರ್, ಆದಿಲ್ ಎಂ, ಅಶ್ರಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿಪಿ, ರೆಹಾನ್ ಎಂಪಿ ಮತ್ತು ಶಿನಾಸ್ ಎಂಬ ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಕಾಲೇಜು ಗೇಟ್ ಮುಂದೆಯೇ ಕಿಡ್ನ್ಯಾಪ್
ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯಾದ ಅಮೀರ್ ಅಲಿ ಮತ್ತು ಆತನ ಸಹಪಾಠಿ ಮಹಮ್ಮದ್ ಅಲ್ಫಾಜ್ ಆಗಸ್ಟ್ 19ರಂದು ಮಧ್ಯಾಹ್ನ 3:19ರ ಸುಮಾರಿಗೆ ಕಾಲೇಜಿನಿಂದ ಹೊರಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬಂದ ಸೀನಿಯರ್ ವಿದ್ಯಾರ್ಥಿಗಳ ಗ್ಯಾಂಗ್, ಅವರಿಬ್ಬರನ್ನೂ ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು, ಅಪರಿಚಿತ ಮನೆಯೊಂದರ ಕೋಣೆಗೆ ಕರೆದೊಯ್ದು ಕೂಡಿಹಾಕಿದೆ.
ಬೆತ್ತಲೆಗೊಳಿಸಿ ಬೆಲ್ಟ್‌ನಿಂದ ಥಳಿತ
ವಿಕೃತಿಯ ಪರಮಾವಧಿ ತಲುಪಿದ ಸೀನಿಯರ್ಸ್, ಇಬ್ಬರು ಜೂನಿಯರ್ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ, ಅವರ ಬಾಯಿಗೆ ಬಟ್ಟೆ ತುರುಕಿ ಬೆಲ್ಟ್, ಬಟ್ಟೆ ಹ್ಯಾಂಗರ್ ಹಾಗೂ ಕೈಗಳಿಂದ ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕೈಗೆ ಕಬ್ಬಿಣದ ನಕಲ್ ಡಸ್ಟರ್ ಧರಿಸಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಈ ಇಡೀ ಭೀಕರ ಕೃತ್ಯವನ್ನು ಒಬ್ಬ ಆರೋಪಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ.
ಗಲೀಜು ನೀರು ಸುರಿದು ವಿಕೃತಿ
ಅಷ್ಟಕ್ಕೆ ನಿಲ್ಲದ ಇವರ ವಿಕೃತಿ, ನೋವಿನಿಂದ ನರಳುತ್ತಿದ್ದ ವಿದ್ಯಾರ್ಥಿಗಳು ಕುಡಿಯಲು ನೀರು ಕೇಳಿದಾಗ, ರೋಹನ್ ರಮೇಶ್ ಎಂಬ ಆರೋಪಿ ಗಲೀಜು ನೀರನ್ನು ತಂದುಕೊಟ್ಟಿದ್ದಾನೆ. ವಿದ್ಯಾರ್ಥಿಗಳು ಅದನ್ನು ಕುಡಿಯಲು ನಿರಾಕರಿಸಿದಾಗ, ಆ ಗಲೀಜು ನೀರನ್ನು ಅವರ ಮೈಮೇಲೆಯೇ ಸುರಿದು ವಿಕೃತವಾಗಿ ವರ್ತಿಸಿದ್ದಾರೆ. ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಬಂಧನದಲ್ಲಿಟ್ಟು, ʼಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆʼ ಎಂದು ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಇದನ್ನೂ ಓದಿ:
ಹೆದರಿ ತಡವಾಗಿ ದೂರು ನೀಡಿದ ವಿದ್ಯಾರ್ಥಿ
ಈ ಘಟನೆ ನಡೆದು ಅವರು ಕಾಲೇಜಿಗೆ ಮರಳಿದ ಮೇಲೂ, ನಸೀದ್ ಅಮೀರ್ ಎಂಬಾತ ಮತ್ತೆ ಬೆದರಿಕೆ ಹಾಕಿದ್ದ. ತಮಗೆ ಬಂದಿದ್ದ ಪ್ರಾಣ ಬೆದರಿಕೆಯಿಂದ ಹೆದರಿದ್ದ ವಿದ್ಯಾರ್ಥಿ ಅಮೀರ್ ಅಲಿ, ಕೊನೆಗೆ ಧೈರ್ಯ ಮಾಡಿ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದಾನೆ. ಕುಟುಂಬಸ್ಥರ ಸಹಾಯದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.



