ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇವಾ ಮನೋಭಾವವನ್ನು ನಾವೀನ್ಯತೆಯೊಂದಿಗೆ ಬೆಸೆದು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸುವಂತೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಯುವಜನರಿಗೆ ಕರೆ ನೀಡಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ದಕ್ಷಿಣ ವಲಯಕ್ಕಾಗಿ ಆಯೋಜಿಸಿದ್ದ ‘ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಇನ್ನೋವೇಶನ್ ಚಾಲೆಂಜ್‌ನ ವೆಬ್‌ಸೈಟ್ ಮತ್ತು ನೋಂದಣಿ ಪೋರ್ಟಲ್‌ಗೂ ಚಾಲನೆ ನೀಡಿದರು.
ಸಮಾಜದ ಸಮಸ್ಯೆಯನ್ನು ಗುರುತಿಸಿ, ಅದರ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡು, ನಾವೀನ್ಯತೆಯ ಮೂಲಕ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು ಸೇವೆಯ ನಿಜವಾದ ಅರ್ಥ ಎಂದ ಸಚಿವರು, ಭಾರತದ ಜನಸಂಖ್ಯೆಯ ಸುಮಾರು ಶೇ.65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಯುವಜನರಲ್ಲಿರುವ ತಂತ್ರಜ್ಞಾನ ಜ್ಞಾನ, ಕುತೂಹಲ ಮತ್ತು ಸೃಜನಶೀಲತೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಕ್ಷಣದಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಅನುಭವ ಆಧಾರಿತ ಕಲಿಕೆ ಮತ್ತು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುತ್ತಿದೆ ಎಂದರು. 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು, 17,300 ಸಂಸ್ಥೆಗಳ ನಾವೀನ್ಯತಾ ಮಂಡಳಿಗಳು ಹಾಗೂ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಂತಹ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಬೆಳೆಸಲು ಸರ್ಕಾರ ಪರಿಸರ ವ್ಯವಸ್ಥೆ ರೂಪಿಸುತ್ತಿದೆ ಎಂದು ಹೇಳಿದರು.
‘ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್’ನಲ್ಲಿ ದೇಶದ ಶಾಲೆಗಳು, ಐಟಿಐಗಳು, ಪಾಲಿಟೆಕ್ನಿಕ್‌ಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಯುವ ನಾವೀನ್ಯಕಾರರು ಭಾಗವಹಿಸಬಹುದಾಗಿದೆ. ಸ್ವಚ್ಛ ಮತ್ತು ಸುಸ್ಥಿರ ಭಾರತ, ಸಮೃದ್ಧ ರೈತರು, ಆರೋಗ್ಯಕರ ಮತ್ತು ಎಲ್ಲರನ್ನು ಒಳಗೊಂಡ ಭಾರತ, ಶಿಕ್ಷಿತ ಮತ್ತು ಕೌಶಲ್ಯಯುತ ಭಾರತ ಹಾಗೂ ಸುರಕ್ಷಿತ ಭಾರತ ಎಂಬ ಐದು ವಿಷಯಗಳಡಿ ಸ್ಪರ್ಧೆ ನಡೆಯಲಿದೆ. ಉತ್ಪನ್ನ ಅಥವಾ ತಂತ್ರಜ್ಞಾನ ಪರಿಹಾರ ಹಾಗೂ ವ್ಯವಹಾರ ಮಾದರಿ ಅಥವಾ ಆಡಳಿತಾತ್ಮಕ ಪರಿಹಾರ ಎಂಬ ಎರಡು ವಿಭಾಗಗಳನ್ನೂ ರೂಪಿಸಲಾಗಿದೆ.
ಬೆಂಗಳೂರಿನ ಐಐಎಸ್‌ಸಿ, ಭಾಗವಹಿಸುತ್ತಿರುವ ಸಂಸ್ಥೆಗಳು, ಬೋಧಕವರ್ಗ, ನವೋದ್ಯಮಗಳು ಹಾಗೂ ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲ ಪಾಲುದಾರರನ್ನು ಅವರು ಅಭಿನಂದಿಸಿದರು. 2026ರ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತಿಮ ಹಂತದಲ್ಲಿ ಭಾರತದಾದ್ಯಂತದ ಅತ್ಯುತ್ತಮ ಪರಿಹಾರಗಳನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದರು.
ಐಐಎಸ್‌ಸಿ ಬೆಂಗಳೂರು ದಕ್ಷಿಣ ವಲಯದ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ತಾಂತ್ರಿಕ ಮೌಲ್ಯಮಾಪನ ಮತ್ತು ಮಾರ್ಗದರ್ಶನಕ್ಕೆ ಬೆಂಬಲ ನೀಡಲಿದೆ.

ಮಾರ್ಗದರ್ಶನ, ಇನ್‌ಕ್ಯುಬೇಷನ್ ಮತ್ತು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶಗಳ ಮೂಲಕ ಭರವಸೆ ಮೂಡಿಸುವ ಆಲೋಚನೆಗಳನ್ನು ಕೇವಲ ಸಲ್ಲಿಕೆಗೆ ಸೀಮಿತಗೊಳಿಸದೆ ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಈ ಚಾಲೆಂಜ್‌ನ ಉದ್ದೇಶವಾಗಿದ್ದು, 2026ರ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 24ರವರೆಗೆ ನೋಂದಣಿಗೆ ಮಾಡಬಹುದಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಿರ್ದೇಶಕರಾದ ಪ್ರೊ. ಗೋವಿಂದನ್ ರಂಗರಾಜನ್; ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆನಂದರಾವ್ ವಿ. ಪಾಟೀಲ್, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿ ಪ್ರೊ. ಶ್ಯಾಮಾ ರಾಥ್, ಎನ್‌ಐಟಿಗಳು ಮತ್ತು ಇತರ ಸಂಸ್ಥೆಗಳ ನಿರ್ದೇಶಕರು ಹಾಗೂ ಪ್ರತಿನಿಧಿಗಳು, ಬೋಧಕವರ್ಗದ ಸದಸ್ಯರು, ಉದ್ಯಮ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಯುವ ನಾವೀನ್ಯಕಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯುವಜನರ ಆಲೋಚನೆಗಳು ಕೇವಲ ಸ್ಪರ್ಧೆಯ ಭಾಗವಾಗಿ ಉಳಿಯದೆ, ನೈಜ ಬದುಕಿನ ಸಮಸ್ಯೆಗಳಿಗೆ ಪರಿಹಾರವಾಗಿ ರೂಪುಗೊಂಡು ಸಮಾಜದಲ್ಲಿ ಅಳವಡಿಕೆಯಾಗಬೇಕು ಎಂಬ ಉದ್ದೇಶ ಈ ಚಾಲೆಂಜ್‌ನಲ್ಲಿದೆ. ಇಂತಹ ಪ್ರಯತ್ನಗಳು 2047ರ ವಿಕಸಿತ ಭಾರತದ ಗುರಿಯಲ್ಲಿ ಯುವಶಕ್ತಿಯ ಪಾಲ್ಗೊಳ್ಳುವಿಕೆಗೆ ಹೊಸ ವೇದಿಕೆ ಕಲ್ಪಿಸುವ ನಿರೀಕ್ಷೆಯಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://sevafirst.mic.gov.in/



