ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಬೈರಮಂಗಲದ ಬಳಿ ಕಳೆದ ಐದು ದಿನಗಳಿಂದ ರಸ್ತೆ ತಡೆದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.
ಪೊಲೀಸ್ ಕ್ರಮದ ವೇಳೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ರೈತರು ಸೆ.21ರಿಂದ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆ ಮೇಲೆ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ಸಂಚಾರಕ್ಕೆ ತಡೆ ಉಂಟುಮಾಡಿದ್ದರು.
ಪ್ರತಿಭಟನಾ ಸ್ಥಳದಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿತ್ತು. ಇದೇ ವೇಳೆ ರಸ್ತೆ ತಡೆ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಯೋಜನೆ ಪರ ನಿಲುವು ಹೊಂದಿರುವ ಕೆಲ ರೈತರೂ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಎರಡೂ ಬಣಗಳ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದರು.
ಇದನ್ನೂ ಓದಿ:
ರಸ್ತೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಪೊಲೀಸರು ಪ್ರತಿಭಟನಾ ಸ್ಥಳ ತೆರವುಗೊಳಿಸಲು ಮುಂದಾದಾಗ ಸ್ಥಳದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ಕೆಲವು ರೈತ ಮಹಿಳೆಯರು ರಸ್ತೆಯಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿದ್ದ ಗಣೇಶ ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸಿದರು.
ಬಳಿಕ ಪೊಲೀಸರು ಪ್ರತಿಭಟನಾನಿರತ ಮಹಿಳೆಯರು ಹಾಗೂ ರೈತರನ್ನು ಚದುರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಎತ್ತಿನಗಾಡಿ, ಟ್ರ್ಯಾಕ್ಟರ್ಗಳನ್ನು ತೆರವುಗೊಳಿಸಲಾಯಿತು. ಪ್ರತಿಭಟನಾ ಸ್ಥಳದಲ್ಲಿ ನೆರಳಿಗಾಗಿ ಕಟ್ಟಲಾಗಿದ್ದ ಸೀರೆಗಳು ಮತ್ತು ಗ್ರೀನ್ಮ್ಯಾಟ್ಗಳನ್ನೂ ಪೊಲೀಸರು ತೆಗೆದುಹಾಕಿದರು.
ರಸ್ತೆಯಲ್ಲಿದ್ದ ಕಸ ಹಾಗೂ ಇತರ ವಸ್ತುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಬೈರಮಂಗಲ ಗ್ರಾಮದಲ್ಲಿದ್ದ ಕೆಲವು ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು, ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನೂ ಅಲ್ಲಿಂದ ಕಳುಹಿಸಿದರು.



