September 27, 2026
Sunday, September 27, 2026
spot_img

ಅನ್ನದಾತನಿಗೆ ಆಸರೆಯಾಗದ ಮಳೆರಾಯ: ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಚಿಗಳ್ಳಿ ಗ್ರಾಮದ ರೈತನೊಬ್ಬ ಬೆಳೆ ಹಾನಿ ಹಾಗೂ ಸಾಲದ ಚಿಂತೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.


ಚಿಗಳ್ಳಿ ಗ್ರಾಮದ ಶಿವಲಿಂಗ ಮಲಗುಂದ (30) ಮೃತ ರೈತ. ಗೊಟಗೋಡಿಕೊಪ್ಪ ಗ್ರಾಮದಲ್ಲಿರುವ ಮೃತ ಹಾಗೂ ತಮ್ಮ ತಾಯಿ ರೇಣುಕಾ ಅವರ ಮೂರು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು 2019ರಲ್ಲಿ ಮಳಗಿ ಸೊಸೈಟಿಯಲ್ಲಿ 71 ಸಾವಿರ ಸಾಲ ಪಡೆದಿದ್ದರು. ಬಡ್ಡಿ ಸೇರಿದಂತೆ ಸಾಲದ ಮೊತ್ತ 1.35 ರೂ ಲಕ್ಷಕ್ಕೆ ಏರಿಕೆಯಾಗಿತ್ತು ಎನ್ನಲಾಗಿದೆ.


ಈ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಹಾನಿಗೊಳಗಾಗಿದ್ದು, ಸಾಲದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಶಿವಲಿಂಗ ಅವರು ಸೆ.23ರಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಲಿಂಗ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಸಹೋದರ ಮಹಾಲಿಂಗ ಮಲಗುಂದ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read