September 27, 2026
Sunday, September 27, 2026
spot_img

ವದಂತಿ ಕಿಡಿ: ಪಂಜಾಬ್‌ನ LPU ಕ್ಯಾಂಪಸ್‌ನಲ್ಲಿ ಪ್ರತಿಭಟನೆ; ಆಸ್ತಿಪಾಸ್ತಿ ಧ್ವಂಸ, ರಾಷ್ಟ್ರೀಯ ಹೆದ್ದಾರಿ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ನ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಕ್ಯಾಂಪಸ್‌ನಲ್ಲಿ ಭಾನುವಾರ ಮುಂಜಾನೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಹಾಗೂ ಆತ್ಮಹತ್ಯೆಯ ವದಂತಿಗಳಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಆದರೆ, ಇವೆಲ್ಲವೂ ಕೇವಲ ವದಂತಿಗಳಾಗಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

 ಗರ್ಲ್ಸ್ ಹಾಸ್ಟೆಲ್‌ನಿಂದ ಶುರುವಾದ ಪ್ರತಿಭಟನೆ

ಯೂನಿವರ್ಸಿಟಿಯ ಗರ್ಲ್ಸ್ ಹಾಸ್ಟೆಲ್ ಬಳಿ ಆರಂಭವಾದ ಈ ಪ್ರತಿಭಟನೆ, ನೋಡನೋಡುತ್ತಿದ್ದಂತೆಯೇ ಇತರೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಸೇರಿದ ನಂತರ ತೀವ್ರ ಸ್ವರೂಪ ಪಡೆದುಕೊಂಡಿತು. ನೂರಾರು ವಿದ್ಯಾರ್ಥಿಗಳು ಒಟ್ಟಾಗಿ ಯೂನಿವರ್ಸಿಟಿಯ ಮುಖ್ಯ ದ್ವಾರದತ್ತ ಧಾವಿಸಿ ಆಕ್ರೋಶ ಹೊರಹಾಕಿದರು. ಈ ವೇಳೆ ವಿಶ್ವವಿದ್ಯಾಲಯದ ಕಿಟಕಿ ಗಾಜುಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ, ಕೆಲವು ವಸ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ತೀವ್ರತೆ ಕ್ಯಾಂಪಸ್‌ನಿಂದ ಹೊರಗೆ ಹರಡಿದ್ದು, ವಿದ್ಯಾರ್ಥಿಗಳು ಜಲಂಧರ್-ಫಗ್ವಾರಾ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆದು ಕುಳಿತರು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಇದು ಕೇವಲ ವದಂತಿ: ಪೊಲೀಸ್ ಸ್ಪಷ್ಟನೆ

ಸ್ಥಳಕ್ಕೆ ಪೊಲೀಸ್ ಪಡೆಯೊಂದಿಗೆ ಧಾವಿಸಿದ ಕಪುರ್ತಲಾ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಗೌರವ್ ತೂರಾ ಅವರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ, ಇನ್ನು ಕೆಲವರು ಅತ್ಯಾಚಾರ ನಡೆದಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಆದರೆ, ನಮಗೆ ಈವರೆಗೆ ಯಾವುದೇ ದೂರು ಬಂದಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳು ಕೇವಲ ವದಂತಿಗೆ ಮಾತ್ರವಲ್ಲದೆ, ಯೂನಿವರ್ಸಿಟಿ ಆಡಳಿತ ಮಂಡಳಿಯು ತಮ್ಮ ಅಹವಾಲುಗಳನ್ನು ಸರಿಯಾಗಿ ಆಲಿಸುತ್ತಿಲ್ಲ ಎಂದು ಪೊಲೀಸರ ಮುಂದೆ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪೊಲೀಸರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸರಣಿ ವದಂತಿಗಳ ಆತಂಕ

ಕಳೆದ ಶನಿವಾರವಷ್ಟೇ ಪಂಜಾಬ್‌ನ ರಾಜ್‌ಪುರ ಸಮೀಪದ ‘ಚಿತ್ಕಾರ ಯೂನಿವರ್ಸಿಟಿ’ಯಲ್ಲೂ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಇಂತಹುದೇ ಸುದ್ದಿ ಹರಡಿ ವಿದ್ಯಾರ್ಥಿಗಳು ಹೈಡ್ರಾಮಾ ಸೃಷ್ಟಿಸಿದ್ದರು. ಸದ್ಯ ಎಲ್‌ಪಿಯು ಕ್ಯಾಂಪಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಗಲಭೆ ಮತ್ತು ಸಾರ್ವಜನಿಕ ಆಸ್ತಿ ನಾಶದ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

Must Read