September 27, 2026
Sunday, September 27, 2026
spot_img

KPSC ನೇಮಕಾತಿ ಅಕ್ರಮ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಮತ್ತೆ 8 ದಿನ ED ಕಸ್ಟಡಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಅಕ್ರಮ ಹಣಕಾಸು ವರ್ಗಾವಣೆ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಗ್ಯಾನೇಂದ್ರ ಕುಮಾರ್ ಅವರನ್ನು ಮತ್ತೆ 8 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಗ್ಯಾನೇಂದ್ರ ಕುಮಾರ್ ಪರ ವಕೀಲರು ಇ.ಡಿ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿ, “ನಮ್ಮ ಕಕ್ಷಿದಾರರು ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿದೆ. ವಿಚಾರಣೆಯ ನೆಪದಲ್ಲಿ ಅಧಿಕಾರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ವಾದಿಸಿ, ಕಸ್ಟಡಿಗೆ ನೀಡದಂತೆ ಮನವಿ ಮಾಡಿದರು.

ಆದರೆ ಇದಕ್ಕೆ ಖಡಕ್ ಆಗಿ ತಿರುಗೇಟು ನೀಡಿದ ಇ.ಡಿ ಪರ ವಕೀಲರು, ಪ್ರಕರಣದಲ್ಲಿ ನಡೆದಿರುವ ಅಪಾರ ಪ್ರಮಾಣದ ಹಣಕಾಸಿನ ವಂಚನೆಯ ಕರಾಳ ಸತ್ಯಗಳನ್ನು ನ್ಯಾಯಾಲಯದ ಮುಂದಿಟ್ಟರು.

2026ರ ಜನವರಿ 9 ರಂದು ಪರೀಕ್ಷೆ ನಡೆದಿದೆ. ಆದರೆ ಪರೀಕ್ಷೆಗೆ ಸುಮಾರು 6 ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಅಕ್ರಮ ಹಣ ಸಂಗ್ರಹಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್ ಕನ್ನಾಳೆ ಜೊತೆಗೆ ಚಿನ್ನಾಭರಣ ಖರೀದಿ ಮತ್ತು ಬೃಹತ್ ಪ್ರಮಾಣದ ನಗದು ವ್ಯವಹಾರಗಳು ನಡೆದಿವೆ. ಅಕ್ರಮವಾಗಿ ಗಳಿಸಿದ ಹಣವನ್ನು ಮರೆಮಾಚಲು ಗ್ಯಾನೇಂದ್ರ ಅವರು ತಮ್ಮ ಸೋದರ ಸಂಬಂಧಿಯ ಬ್ಯಾಂಕ್ ಅಕೌಂಟ್ ಮೂಲಕವೇ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಈ ಎಲ್ಲಾ ಆಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರು, ಪ್ರಕರಣದ ತನಿಖೆ ಇನ್ನೂ ನಿರ್ಣಾಯಕ ಹಂತದಲ್ಲಿರುವುದರಿಂದ ಮತ್ತು ಅಕ್ರಮದ ಮುಖವಾಡ ಕಳಚಲು ಆರೋಪಿಯ ವಿಚಾರಣೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟು, ಅಕ್ಟೋಬರ್ 3ರ ಮಧ್ಯಾಹ್ನ 3 ಗಂಟೆಗೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿ ಇ.ಡಿ ಕಸ್ಟಡಿಗೆ ವಹಿಸಿದ್ದಾರೆ.

Must Read