ಹೊಸದಿಗಂತ ವರದಿ ರಾಮನಗರ:
ಬಾಲಕೃಷ್ಣ ಅಲ್ಲ, ಬರೀ ಬಾಲ ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಶಾಸಕ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಲವನ್ನು ಅವರ ಕೈಗೆ ಕೊಟ್ಟುಬಿಡಿ, ಹಿಡ್ಕೊಂಡು ಓಡಾಡ್ಲಿ. ರಾಜಣ್ಣ ಅವರ ಮನೆ ದೇವರ ಬಳಿ ನಾನೇ ಬರುತ್ತೇನೆ. ನಾವು ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿಲ್ಲ ಎಂದು ಅವರು ಪ್ರಮಾಣ ಮಾಡಲಿ. ಹಾಗೆ ಪ್ರಮಾಣ ಮಾಡಿದರೆ ನಾನು ಅವರಿಗೆ ಶರಣಾಗುತ್ತೇನೆ ಎಂದು ಸವಾಲು ಹಾಕಿದ್ದಾರೆ.
ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ, ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಬಹಳ ದಿನ ಡೂಪ್ ರಾಜಕಾರಣ ನಡೆಯುವುದಿಲ್ಲ, ಪ್ರಾಮಾಣಿಕವಾದ ರಾಜಕಾರಣ ಮಾತ್ರ ಉಳಿಯುತ್ತದೆ. ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿದ್ದು ಸತ್ಯ ಎಂದು ಸ್ವತಃ ಅವರ ಮಗನೇ ಹೇಳಿದ್ದಾರೆ. ಕುಮಾರಸ್ವಾಮಿ ಬಳಿ ಏನು ಕಡ್ಲೆಪುರಿ ತಿನ್ನಕ್ಕೆ ಹೋಗಿದ್ರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:
ಪಕ್ಷ ನಿಷ್ಠೆಯ ವಿಚಾರವಾಗಿ ಮಾತನಾಡಿದ ಅವರು, ನಾವು ಯಾರು ತಪ್ಪು ಮಾಡಿದರೂ ತಪ್ಪು ಅಂತ ಹೇಳ್ತೀವಿ. ನಾವೇ ತಪ್ಪು ಮಾಡಿದರೂ ಹೇಳಲಿ. ಇಲ್ಲಿ ಪಕ್ಷ ನಿಷ್ಠೆ ಮುಖ್ಯ. ಅಣ್ಣನಿಗೆ ಮಂತ್ರಿಯಾಗಿ ಒಳ್ಳೆ ಕಾಸು ಆಯ್ತು, ಇನ್ನೇನು ಮಾಡ್ತಾರೆ? ಎಂದು ಆರೋಪಿಸಿದರು.
ಇದೇ ವೇಳೆ, ಬರ ಪರಿಹಾರದ ಹಣಕ್ಕೆ ಡಿ.ಕೆ. ಶಿವಕುಮಾರ್ ಲಂಡನ್ ಕೋರ್ಟ್ಗೆ ಅರ್ಜಿ ಹಾಕಲು ಹೋಗಿದ್ದಾರಾ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು.
ಅಂತಹ ಚಿಲ್ಲರೆ ಹೇಳಿಕೆಗಳ ಬಗ್ಗೆ ನನ್ನನ್ನು ಕೇಳಬೇಡಿ. ಅವರು ಒಬ್ಬ ಚಿಲ್ಲರೆ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ತಮ್ಮ ತೂಕದ ಲೆವೆಲ್ನಲ್ಲಿ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹೋಗಿರುವುದು ಜಪಾನ್ಗೆ, ಲಂಡನ್ಗೆ ಅಲ್ಲ. ಕೈಗಾರಿಕೆ ವಿಚಾರವಾಗಿ ಚರ್ಚಿಸಲು ಸಚಿವ ಎಂ.ಬಿ. ಪಾಟೀಲ್ ಅವರ ಜೊತೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.



