ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ವಾಹನ ಉತ್ಪಾದನಾ ದೈತ್ಯ ಟೊಯೋಟಾ ಕರ್ನಾಟಕದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಕಂಪನಿಯ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಭವಿಷ್ಯದಲ್ಲಿ ವಾರ್ಷಿಕ 10 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿರುವ ಟೊಯೋಟಾ ಜತೆ ಕರ್ನಾಟಕದ ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಪಾನ್ ಪ್ರವಾಸದಲ್ಲಿ ಮಹತ್ವದ ಮಾತುಕತೆ ನಡೆದಿದೆ.
ಜಪಾನ್‌ನ ಮೊಟೊಮಾಚಿ ಘಟಕದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್‌ನ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಭೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಉತ್ಪಾದನಾ ಘಟಕಗಳ ವಿಸ್ತರಣೆ, ಹೊಸ ಹೂಡಿಕೆಗಳು ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಟೊಯೋಟಾ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಸಕಾಜು ಯೋಶಿಮುರಾ ನೇತೃತ್ವದ ನಿಯೋಗ ಸಭೆಯಲ್ಲಿ ಭಾಗವಹಿಸಿತು.
ಇದನ್ನೂ ಓದಿ:
ಕರ್ನಾಟಕದಲ್ಲಿ ಟೊಯೋಟಾ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗುವಂತೆ ಸಿಎಂ ಪ್ರೋತ್ಸಾಹಿಸಿದರು. ಅಲ್ಲದೆ, ಜಪಾನ್‌ನಲ್ಲಿ ಜನಪ್ರಿಯವಾಗಿರುವ ಟ್ಯಾಕ್ಸಿ ಮಾದರಿಯನ್ನು ಕರ್ನಾಟಕದಲ್ಲಿಯೂ ಪರಿಚಯಿಸುವಂತೆ ಸಲಹೆ ನೀಡಿದರು. ಕಡಿಮೆ ವೆಚ್ಚದ ಹೈಬ್ರಿಡ್ ಎಲೆಕ್ಟ್ರಿಕ್ ಟ್ಯಾಕ್ಸಿ ವಾಹನಗಳು ಪ್ರಯಾಣಿಕರಿಗೆ ಕೈಗೆಟುಕುವ ಸಾರಿಗೆ ವ್ಯವಸ್ಥೆ ಒದಗಿಸಲು ನೆರವಾಗಬಹುದು ಎಂದು ತಿಳಿಸಿದರು. ಫ್ಲೆಕ್ಸ್ ಫ್ಯೂಲ್ ವಾಹನಗಳ ಪರಿಚಯ ಹಾಗೂ ಪರ್ಯಾಯ ಇಂಧನಗಳ ಬಳಕೆಯ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಟೊಯೋಟಾ ಆಡಳಿತ ಮಂಡಳಿಗೆ ಆಹ್ವಾನ ನೀಡಲಾಯಿತು.
ಸಭೆಯ ಬಳಿಕ ಸಿಎಂ ಹಾಗೂ ಸಚಿವರು ಟೊಯೋಟಾದ ಮೊಟೊಮಾಚಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಹೈಬ್ರಿಡ್, ಬ್ಯಾಟರಿ ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಫ್ಯೂಲ್ ಸೆಲ್ ವಾಹನಗಳ ಉತ್ಪಾದನಾ ತಂತ್ರಜ್ಞಾನವನ್ನು ವೀಕ್ಷಿಸಿದರು. ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕದ ಐಟಿಐ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು.



