September 26, 2026
Saturday, September 26, 2026
spot_img

SHOCKING NEWS | ಮಂಗಳೂರಿನಲ್ಲಿ ಕಟ್ಟಡದಿಂದ ಕೆಳಕ್ಕೆ ಉರುಳಿ ಐವರು ವಿದ್ಯಾರ್ಥಿಗಳು ಗಂಭೀರ

ಹೊಸದಿಗಂತ, ಮಂಗಳೂರು:


ನಗರದ ಎಮ್ಮೆಕೆರೆ ಕ್ರಾಸ್ ಬಳಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದರ ಮೊದಲ ಮಹಡಿಯಲ್ಲಿನ ತಡೆಬೇಲಿ ಕುಸಿದು ಅದಕ್ಕೆ ಒರಗಿ ಸಿಂತಿದ್ದ ಐವರು ವಿದ್ಯಾರ್ಥಿಗಳು ನೆಲಕ್ಕುರುಳಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.


ಈ ಪೈಕಿ ಒಬ್ಬಾತನ ಸ್ಥಿತಿ ಗಂಭೀರವಾಗಿದ್ದು, ಎಲ್ಲಾ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಸಬ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಹಳೆಯಂಗಡಿಯ ಮಹಮ್ಮದ್ ಶಮಾಜ್ (16) ಎಂಬವರಿಗೆ ಗಂಭೀರ ಗಾಯಗೊಂಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಸೂರಿಂಜೆಯ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರಿನ ಹನೀಫ್ (23), ಕಾವೂರು ಗಾಂಧಿ ನಗರದ ದಾವೂದ್ ಫರ್ಸಿನ್ ಅಹಮ್ಮದ್ (18) ಗಾಯಗೊಂಡವರಾಗಿದ್ದಾರೆ.


ಇಲ್ಲಿನ ಸಭಾಭವನವೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಸಂಘಟನೆಯ ಸಮಾರಂಭವೊಂದನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸಭಾಭವನದಲ್ಲಿ ಭಾರಿ ಜನದಟ್ಟಣೆ ಉಂಟಾಗಿತ್ತು. ಮೊದಲ ಮಹಡಿಯ ಕಾರಿಡಾರ್‌ನಲ್ಲಿ ಹೊರಗೆ ನಿಂತಿದ್ದ ಕೆಲವು ವಿದ್ಯಾರ್ಥಿಗಳು ಅಲ್ಲಿನ ತಡೆ ಗೋಡೆಗೆ ಒರಗಿ ನಿಂತಿದ್ದರು. ಗೋಡೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ತಡೆಬೇಲಿ ಏಕಾಏಕಿ ಕುಸಿದುಬಿದ್ದು, ಈ ದುರಂತ ಸಂಭವಿಸಿದೆ. ಗಾಯಗೊಂಡ ಎಲ್ಲ ಐವರೂ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಓರ್ವ ವಿದ್ಯಾರ್ಥಿ ಮೆದುಳು ನಿಷ್ಕ್ರಿಯ ಸ್ಥಿತಿಯಲ್ಲಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ನಿಗಾವಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಯಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಭಾಭವನದ ಸುರಕ್ಷತಾ ಕ್ರಮಗಳ ಲೋಪ ಹಾಗೂ ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Must Read