ಹೊಸದಿಗಂತ ವರದಿ ವಿಜಯಪುರ:
ಮಹಾರಾಷ್ಟ್ರ ಭಾಗದ ಭೀಮಾ ನದಿ ಪಾತ್ರದಲ್ಲಿ 27 ಟಿಎಂಸಿ ನೀರಿದ್ದು, ನಮ್ಮ ಪಾಲಿನ ನೀರು ಬಿಡಲು ಕೂಡ ಅವರು ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕಕ್ಕೆ ಒಂದೇ ಒಂದು ಹನಿ ನೀರು ಹರಿಸಬಾರದು ಎಂಬ ಮಹಾರಾಷ್ಟ್ರದ ಧೋರಣೆ ತೀವ್ರ ಖಂಡನೀಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗಕ್ಕೆ ನೀರು ತಲುಪುತ್ತದೆ ಎನ್ನುವ ಕಾರಣಕ್ಕೆ ಗಡಿ ಅಂಚಿನ ತಮ್ಮ ರಾಜ್ಯದ ಪ್ರದೇಶಗಳಿಗೂ ನೀರು ಹರಿಸಲು ಮಹಾರಾಷ್ಟ್ರ ಹಿಂದೇಟು ಹಾಕುತ್ತಿದೆ. ಮಹಾರಾಷ್ಟ್ರ ನೀರು ಹರಿಸುವ ನಿಟ್ಟಿನಲ್ಲಿ ಅತ್ಯಂತ ನೋವು ತರಿಸುವ ನಿರ್ಧಾರ ಕೈಗೊಳ್ಳುತ್ತಿದೆ ಎಂದು ದೂರಿದರು.
ದಸೂರ, ಉಮರಜ ಭಾಗಕ್ಕೂ ನೀರು ತಲುಪದಂತೆ ಮಹಾ ನೋಡಿಕೊಳ್ಳುತ್ತಿದೆ. ಈ ಧೋರಣೆ ಕಡಿವಾಣ ಹಾಕಬೇಕಿದೆ. 15 ಟಿಎಂಸಿ ನೀರು ಅವರು ಕೊಡಲೇಬೇಕು, ಈ ನಿಟ್ಟಿನಲ್ಲಿ ಒಡಂಬಡಿಕೆಯೂ ಇದೆ, ಆದರೆ ಈ ಒಡಂಬಡಿಕೆಯೇ ಆಗಿಲ್ಲ, ನೈಸರ್ಗಿಕ ಹರಿವಿಗೆ ಇದು ಸೀಮಿತ ಎಂಬ ಮಹಾರಾಷ್ಟ್ರ ವಾದದಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಇದನ್ನೂ ಓದಿ:
ಈ ಎಲ್ಲ ಸಮಸ್ಯೆ ಕಲಬುರಗಿ, ವಿಜಯಪುರ ಇತರೆ ಜಿಲ್ಲೆಗಳಿಗೆ ದೊಡ್ಡ ಹೊಡೆತ ಕೊಡುತ್ತಿದೆ, ಹೀಗಾಗಿ ಈ ವಿಷಯವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಮುತವರ್ಜಿ ವಹಿಸಿದ್ದಾರೆ. ಇದಕ್ಕೊಂದು ತಾರ್ಕಿಕ ಅಂತ್ಯ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ ಎಂದರು.
ಕೇಂದ್ರ ಸರ್ಕಾರ ಕೂಡಲೇ ಎಲ್ಲ ರಾಜ್ಯಗಳ ಸಭೆ ಕರೆದು ಜಲ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಕಳಕಳಿಯ ಹೆಜ್ಜೆ ಇರಿಸಬೇಕು ಹಾಗೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಜೊತೆ ಸಮನ್ವಯ ಸಾಧಿಸಿ ನೀರು ಹರಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕು ಎಂದರು.
ಬರ ಹಾಗೂ ನೆರೆಯಿಂದ ಗಡಿ ಭಾಗದ ರೈತರ ಬದುಕು ಅಕ್ಷರಶಃ ಕಣ್ಣೀರು ಹಾಕುವಂತಾಗಿದೆ, ನೆರೆ ಬಂದರೆ ಆತನ ಬದುಕೇ ಹಾಳಾಗುತ್ತದೆ, ನದಿ ಒಮ್ಮೊಮ್ಮೆ ರಕ್ಷಣೆ ಮಾಡುತ್ತದೆ, ಮತ್ತೊಮ್ಮೆ ಬದುಕು ಸಹ ಕೊಚ್ಚಿ ಹೋಗುವಂತೆ ಮಾಡುತ್ತದೆ, ಬರ, ನೆರೆ ಹಾವಳಿ ಬಂದಾಗ ಅದರ ಬಗ್ಗೆ ನೆನಪು ಮಾಡಿಕೊಳ್ಳುತ್ತೇವೆ, ನಂತರ ಅದನ್ನು ನೆನಪು ಹಾರಿ ಬಿಡುತ್ತೇವೆ. ಹೀಗಾಗಿ ಅದರ ನಿವಾರಣೆಗಾಗಿಯೇ ಹಾಗೂ ಈ ಪರಿಸ್ಥಿತಿ ಸಮಗ್ರವಾಗಿ ಅವಲೋಕಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಹಾಗೂ ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸುವಂತೆ ಒತ್ತಾಯಿಸಿರುವೆ ಎಂದರು.
ಕೃಷ್ಣಾ, ಕಾವೇರಿ ನದಿಗಳಂತೆ ಉಪ ನದಿಗಳ ರಕ್ಷಣೆಯೂ ಅಗತ್ಯ, ಆದರೆ ನದಿ ಪಾತ್ರದ ರಕ್ಷಣೆಯ ಜವಾಬ್ದಾರಿಯಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾದ ಭೂಗರ್ಭ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ವ್ಯಾಪಕವಾಗಿದೆ ಎಂದರು.



