ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಮೂರು ದಿನಗಳ ಮಹತ್ವದ ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉಭಯ ದೇಶಗಳ ನಡುವೆ ಕೇವಲ ಸಾರ್ವಜನಿಕ ಪ್ರದರ್ಶನ ಅಥವಾ ಔಪಚಾರಿಕ ಭೇಟಿಗಿಂತಲೂ ಹೆಚ್ಚಾಗಿ, ರಾಜತಾಂತ್ರಿಕ ಬಾಂಧವ್ಯಕ್ಕೆ ಈ ಭೇಟಿ ಸಾಕ್ಷಿಯಾಗಿದೆ.
ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಈ ಉನ್ನತ ಮಟ್ಟದ ಮಾತುಕತೆಯಲ್ಲಿ ಬರೋಬ್ಬರಿ 30 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕಲಾಗಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆಯನ್ನು ರೂಪಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.
30ಬಿಲಿಯನ್ ವ್ಯಾಪಾರ ಒಪ್ಪಂದ
ಎರಡು ದೇಶಗಳ ನಡುವೆ ಒಟ್ಟು 30 ಬಿಲಿಯನ್ ಡಾಲರ್ ಮೌಲ್ಯದ ಸೂಕ್ಷ್ಮವಲ್ಲದ ಸರಕುಗಳ ವಿನಿಮಯಕ್ಕೆ ಹೆಚ್ಚು ಅನುಕೂಲಕರವಾದ ಸುಂಕದ ವ್ಯವಸ್ಥೆಯನ್ನು ಕಲ್ಪಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಅಮೆರಿಕದಿಂದ ಚೀನಾಕ್ಕೆ ಕೃಷಿ ಉತ್ಪನ್ನಗಳು, ಸೀಫುಡ್, ಸೌದೆ-ಮರಮುಟ್ಟುಗಳು, ಸೌಂದರ್ಯವರ್ಧಕಗಳು ಹಾಗೂ ವೈದ್ಯಕೀಯ ಉಪಕರಣಗಳು ರಫ್ತಾಗಲಿವೆ. ಪ್ರತಿಯಾಗಿ ಚೀನಾದಿಂದ ಅಮೆರಿಕಕ್ಕೆ ಸಣ್ಣ ಗೃಹೋಪಯೋಗಿ ಉಪಕರಣಗಳು, ಆಟಿಕೆಗಳು, ಹಬ್ಬದ ಅಲಂಕಾರಿಕ ವಸ್ತುಗಳು ಮತ್ತು ಮಕ್ಕಳ ಕಾರ್ ಸೀಟ್ಗಳು ರಫ್ತಾಗಲಿವೆ. ಚೀನಾ ದೇಶವು 2027 ಮತ್ತು 2028 ರ ಅವಧಿಯಲ್ಲಿ ಅಮೆರಿಕದಿಂದ ಕನಿಷ್ಠ 10 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಸಮ್ಮತಿಸಿದೆ.
‘ಸೂಪರ್ ಇಂಟೆಲಿಜೆನ್ಸ್’ ಮಾತುಕತೆ
ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ‘ಸೂಪರ್ ಇಂಟೆಲಿಜೆನ್ಸ್’ (SI) ಎಂಬ ಹೊಸ ಪರಿಕಲ್ಪನೆಯನ್ನು ಬಳಸಲು ಅಮೆರಿಕ-ಚೀನಾ ನಿರ್ಧರಿಸಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ‘ಯುಎಸ್-ಚೀನಾ ಸೂಪರ್ ಇಂಟೆಲಿಜೆನ್ಸ್ ಡೈಲಾಗ್’ ಅನ್ನು ಸ್ಥಾಪಿಸಲಾಗಿದೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಯಾವುದೇ ತುರ್ತು ಘಟನೆಗಳು ಅಥವಾ ಅಪಾಯಕಾರಿ ಸಂದರ್ಭಗಳನ್ನು ನಿಭಾಯಿಸಲು ಎರಡು ದೇಶಗಳ ನಡುವೆ ನೇರ ದ್ವಿಪಕ್ಷೀಯ ಸಂವಹನ ವಾಹಿನಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಜಾಗತಿಕ ಸ್ಥಿರತೆಗೆ ಒಮ್ಮತ
ಮಾತುಕತೆಯ ವೇಳೆ ರಷ್ಯಾ, ಉತ್ತರ ಕೊರಿಯಾ ಮತ್ತು ಇರಾನ್ ದೇಶಗಳ ವಿದ್ಯಮಾನಗಳ ಕುರಿತೂ ಚರ್ಚೆ ನಡೆದಿದ್ದು, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಯಾವುದೇ ದೇಶವೂ ಸುಂಕ ವಿಧಿಸುವಂತಿಲ್ಲ ಎಂದು ಟ್ರಂಪ್ ಮತ್ತು ಕ್ಸಿ ಜಿನ್ಪಿಂಗ್ ಒಮ್ಮತಕ್ಕೆ ಬಂದಿದ್ದಾರೆ.
ಭೇಟಿಯ ನಂತರ ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಬರೆದುಕೊಂಡಿರುವ ಡೊನಾಲ್ಡ್ ಟ್ರಂಪ್, ʼಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಭೇಟಿಯು ಯಶಸ್ವಿಯಾಗಿದ್ದು, ನಾವು ಮುಂದಿನ ನವೆಂಬರ್ನಲ್ಲಿ ಚೀನಾದಲ್ಲಿ ಹಾಗೂ ಡಿಸೆಂಬರ್ನಲ್ಲಿ ಮಿಯಾಮಿ ಜಿ20 ಶೃಂಗಸಭೆಯಲ್ಲಿ ಮತ್ತೊಮ್ಮೆ ಭೇಟಿಯಾಗಲಿದ್ದೇವೆʼ ಎಂದು ತಿಳಿಸಿದ್ದಾರೆ. ದಶಕದ ಬಳಿಕ ಚೀನಾ ಅಧ್ಯಕ್ಷರೊಬ್ಬರು ಶ್ವೇತಭವನಕ್ಕೆ ಭೇಟಿ ನೀಡಿದ ಮೊದಲ ಸಂದರ್ಭ ಇದಾಗಿದೆ.



