September 27, 2026
Sunday, September 27, 2026
spot_img

ಮನೆಗೆ ದೀಪ, ದುಷ್ಟರಿಗೆ ಜ್ವಾಲೆ: ಕನ್ನಡಿಗರ ಮನ ಗೆಲ್ಲಲು ಬರ್ತಿದ್ದಾಳೆ ʼಜಗದ್ಧಾತ್ರಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ವಾಹಿನಿಗಳು ಸದಾ ಮುಂಚೂಣಿಯಲ್ಲಿರುತ್ತವೆ. ಇದೀಗ ತನ್ನ ವಿನೂತನ ಕಥೆಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯು ಮತ್ತೊಂದು ಅದ್ದೂರಿ ಕಥಾಹಂದರವನ್ನು ಪರಿಚಯಿಸಲು ಸಜ್ಜಾಗಿದೆ. ಬಹುನಿರೀಕ್ಷಿತ, ಹೈ-ಬಜೆಟ್ ಆ್ಯಕ್ಷನ್ ಕೌಟುಂಬಿಕ ಧಾರಾವಾಹಿ ‘ಜಗದ್ಧಾತ್ರಿ’ ಇದೇ ಸೆಪ್ಟೆಂಬರ್ 28 ರಿಂದ (ನಾಳೆ) ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ವಿಭಿನ್ನ ಕಥಾಹಂದರ

ಇದು ಕೇವಲ ಸತ್ತೆ-ಸೊಸೆ ಜಗಳದ ಸಾಂಪ್ರದಾಯಿಕ ಕಥೆಯಲ್ಲ. ಮನೆಗೆ ದೀಪವಾಗಿದ್ದುಕೊಂಡೇ, ಹೊರಜಗತ್ತಿನ ಕ್ರಿಮಿನಲ್‌ಗಳನ್ನು ಬೇಟೆಯಾಡುವ ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ಸಾಹಸದ ಕಥೆ. ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲೆ ಹೊರಿಸಲಾದ ‘ದೇಶದ್ರೋಹಿ’ ಎಂಬ ಸುಳ್ಳು ಕಳಂಕವನ್ನು ತೊಡೆದುಹಾಕಲು ನಾಯಕಿ ನಡೆಸುವ ಹೋರಾಟವೇ ಈ ಸೀರಿಯಲ್‌ನ ಜೀವಾಳ.

ಕಿರುತೆರೆಗೆ ಘಟಾನುಘಟಿ ತಾರೆಗಳ ಪುನರಾಗಮನ

ಈ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಮೂವರು ಸ್ಟಾರ್ ಕಲಾವಿದರು ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಮೋಕ್ಷಿತಾ ಪೈ ಮತ್ತು  ವಿಜಯ್ ಲಲಿತಾ ಸೂರ್ಯ ಇವರಿಬ್ಬರೂ ಈ ಸೀರಿಯಲ್‌ನಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳ ರೋಲ್‌ನಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಇವರಿಬ್ಬರ ‘ಜಗದ್ಧಾತ್ರಿ ಹುಕ್ ಸ್ಟೆಪ್’ ಡ್ಯುಯೆಟ್ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. “ಬಹಳ ದಿನಗಳ ನಂತರ ಈ ತರಹದ ಕ್ಯೂಟ್ ಪ್ರೇಮಕಥೆ ಇರೋ ರೋಲ್ ಮಾಡುತ್ತಿರುವುದು ಖುಷಿ ಕೊಟ್ಟಿದೆ” ಎಂದು ನಟ ವಿಜಯ್ ಲಲಿತಾ ಸೂರ್ಯ ಹಂಚಿಕೊಂಡಿದ್ದಾರೆ.

ಕವಿತಾ ಗೌಡ ಮತ್ತೊಂದು ಪ್ರಮುಖ ಹಾಗೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ. ಇವರೊಂದಿಗೆ ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್ ಮತ್ತು ಮಾನಸಿ ಸುಧೀರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ದೊಡ್ಡ ತಾರಾಬಳಗವೇ ಈ ಸೀರಿಯಲ್‌ನಲ್ಲಿದೆ.

ಹೊಸ ಅನುಭವದ ಜೊತೆಗೆ ಮನರಂಜನೆ ನೀಡಲಿದೆ

ಕೀರ್ತಿ ಅಕ್ಷಯ ನೆಟ್‌ವರ್ಕ್ ಬ್ಯಾನರ್ ಅಡಿಯಲ್ಲಿ ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಮೆಗಾ ಸೀರಿಯಲ್ ಅನ್ನು ಸಿನಿಮಾ ರಂಗದ ಖ್ಯಾತ ಬರಹಗಾರ-ನಿರ್ದೇಶಕ ಮಹೇಶ್ ರಾವ್ ಮತ್ತು ಪ್ರಕಾಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಮಹೇಶ್ ಸಾರಂಗ್ ಅವರ ಆ್ಯಕ್ಷನ್ ಕಟ್‌ನಲ್ಲಿ ಈ ಸೀರಿಯಲ್ ಅದ್ಭುತವಾಗಿ ಮೂಡಿಬಂದಿದೆ.

ಇದನ್ನೂ ಓದಿ:

ಜ಼ೀ ಕನ್ನಡ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾ,ಡಿ ಜಗತ್ತಿನ ಸೃಷ್ಟಿಗೆ ಕಾರಣವಾದ ಹೆಣ್ಣು, ಇಂದಿನ ಕಾಲಘಟ್ಟದಲ್ಲೂ ಪ್ರತಿ ಮನೆಯಲ್ಲಿ ಹತ್ತಾರು ಸವಾಲುಗಳ ಮಧ್ಯೆ ಬದುಕುತ್ತಾಳೆ. ನಮ್ಮ ಜಗದ್ಧಾತ್ರಿ ಕೂಡ ಮನೆಯ ಸವಾಲುಗಳನ್ನು ನಿಭಾಯಿಸುತ್ತಲೇ ಜಗತ್ತನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದಾಳೆ. ಹಿಂದೆಂದೂ ಕಾಣದ ವಿಭಿನ್ನ ಕಥೆಗಳನ್ನ ಪರಿಚಯ ಮಾಡುತ್ತಲೇ ಬಂದಿದ್ದೇವೆ. ಅದೇ ರೀತಿ ಈ ಕಥೆಯೂ ನೋಡುಗರಿಗೆ ಹೊಸ ಅನುಭವದ ಜೊತೆಗೆ ಜನಮೆಚ್ಚುವ ಮನರಂಜನೆ ನೀಡುತ್ತೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

Must Read