September 27, 2026
Sunday, September 27, 2026
spot_img

ಚೆಸ್ ಒಲಿಂಪಿಯಾಡ್: ಉಜ್ಬೇಕಿಸ್ತಾನ್ ಧೂಳೀಪಟ ಮಾಡಿದ ಭಾರತ; ಚಿನ್ನದ ಪದಕದ ಮೇಲೆ ಕಣ್ಣಿಟ್ಟ ಡಿ. ಗುಕೇಶ್ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

46ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಶನಿವಾರ ನಡೆದ ರೋಚಕ 10ನೇ ಸುತ್ತಿನ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಉಜ್ಬೇಕಿಸ್ತಾನ್-2 ತಂಡವನ್ನು 3.5-0.5 ಅಂತರದಿಂದ ಮಣಿಸಿ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಆಗಿರುವ ಭಾರತವು ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಭಾರತೀಯ ತಾರೆಯರ ಅಬ್ಬರ

ಓಪನ್ ವಿಭಾಗದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳು ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ವಿಶ್ವ ಚಾಂಪಿಯನ್ ಡಿ. ಗುಕೇಶ್, ಯುವ ತಾರೆ ಆರ್. ಪ್ರಜ್ಞಾನಂದ ಹಾಗೂ ನಿಹಾಲ್ ಸರಿನ್ ಅವರು ತಮ್ಮ ಅದ್ಭುತ ನಡೆಗಳ ಮೂಲಕ ಎದುರಾಳಿಗಳನ್ನು ಮಣಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಇನ್ನೊಂದೆಡೆ, ಮಹಿಳಾ ವಿಭಾಗದಲ್ಲಿ ಚೀನಾ ವಿರುದ್ಧ ನಡೆದ ಪಂದ್ಯವು 2-2 ಅಂಕಗಳಿಂದ ಸಮಬಲದಲ್ಲಿ (ಡ್ರಾ) ಅಂತ್ಯಗೊಂಡಿತು. ಭಾರತದ ಪರ ಭರವಸೆಯ ಆಟಗಾರ್ತಿ ಸವಿತಾ ಶ್ರೀ ಅವರು ದಾಖಲಿಸಿದ ಏಕೈಕ ಜಯ, ತಂಡವು ಸೋಲಿನಿಂದ ಪಾರಾಗಲು ಪ್ರಮುಖ ಕಾರಣವಾಯಿತು.

ಅಂಕಪಟ್ಟಿಯ ಲೆಕ್ಕಚಾರ

ಪುರುಷರ ತಂಡವು10 ಸುತ್ತುಗಳ ಮುಕ್ತಾಯದ ನಂತರ ಭಾರತ ತಂಡವು ಒಟ್ಟು 17 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು,18 ಅಂಕ ಕಲೆಹಾಕಿರುವ ಉಜ್ಬೇಕಿಸ್ತಾನ್ ತಂಡಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ. ಭಾರತ ಮಹಿಳಾ ತಂಡವು ಸದ್ಯ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಚೀನಾ (18 ಅಂಕ) ಮತ್ತು ಕಜಕಿಸ್ತಾನ್ (17 ಅಂಕ) ಮೊದಲ ಎರಡು ಸ್ಥಾನಗಳಲ್ಲಿವೆ.

ಇಂದು ಫೈನಲ್ ರೌಂಡ್

ಸೆ. 15ರಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಅಂತಿಮ ಹಾಗೂ ನಿರ್ಣಾಯಕ ಸುತ್ತಿನ ಪಂದ್ಯಗಳು ಇಂದುನಡೆಯಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಭಾರತ ತಂಡ, ಈ ಬಾರಿಯೂ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

Must Read