ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎದುರಾಳಿ ಆಟಗಾರನ ಟ್ಯಾಕಲ್‌ಗೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದ ಆಟಗಾರನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ನಡೆದಿದೆ.
ಕಜ್ರಾ ಮುರ್ಮು ಮೃತಪಟ್ಟ ಆಟಗಾರ ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೊಕಾರೊ ಥರ್ಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಯಾ ಬಸ್ತಿ ಪ್ರದೇಶದಲ್ಲಿ ಸ್ಥಳೀಯ ಕ್ಲಬ್ ಮೂರು ದಿನಗಳ ಹಗಲು-ರಾತ್ರಿ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಿತ್ತು. ಪಂದ್ಯದ ವೇಳೆ ಕಜ್ರಾ ಮುರ್ಮು ಚೆಂಡಿಗಾಗಿ ಓಡುತ್ತಿದ್ದಾಗ ಎದುರಾಳಿ ಆಟಗಾರ ಸ್ಲೈಡಿಂಗ್ ಟ್ಯಾಕಲ್ ನಡೆಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಡಿಕ್ಕಿಯಾಗಿದ್ದು, ಮುರ್ಮು ಮೈದಾನಕ್ಕೆ ಬಿದ್ದಿದ್ದಾರೆ.
ಆರಂಭದಲ್ಲಿ ಘಟನೆ ಸಾಮಾನ್ಯ ಟ್ಯಾಕಲ್‌ನಂತೆ ಕಂಡುಬಂದರೂ, ಕೆಲವೇ ಕ್ಷಣಗಳಲ್ಲಿ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಸಹ ಆಟಗಾರರು ತಕ್ಷಣ ಅವರ ನೆರವಿಗೆ ಧಾವಿಸಿ ಪಂದ್ಯವನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ಅವರನ್ನು ಬೊಕಾರೊದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಿಲ್ಲ
ಆಸ್ಪತ್ರೆಯ ವೈದ್ಯರ ಪ್ರಕಾರ, ಮುರ್ಮು ಅವರ ದೇಹದಲ್ಲಿ ಹೊರಗಿನಿಂದ ಕಾಣುವ ಯಾವುದೇ ಗಂಭೀರ ಗಾಯದ ಗುರುತು ಇರಲಿಲ್ಲ. ಆಂತರಿಕ ಗಾಯವಾಗಿದೆಯೇ ಅಥವಾ ಸಾವಿಗೆ ಬೇರೆ ಕಾರಣವಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಹೀಗಾಗಿ ಸದ್ಯಕ್ಕೆ ಸಾವಿನ ನಿಖರ ಕಾರಣವನ್ನು ಖಚಿತಪಡಿಸಲಾಗಿಲ್ಲ.
ಘಟನೆಯ ಬೆನ್ನಿಗೇ ಆಯೋಜಕರು ಫುಟ್‌ಬಾಲ್ ಪಂದ್ಯಾವಳಿಯನ್ನು ರದ್ದುಗೊಳಿಸಿದ್ದಾರೆ. ಮುರ್ಮು ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಪಂದ್ಯಾವಳಿಯ ವಿಜೇತ ತಂಡಕ್ಕೆ ನೀಡಬೇಕಿದ್ದ 1 ಲಕ್ಷ ರೂ. ಬಹುಮಾನ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುವುದಾಗಿ ಆಯೋಜನಾ ಸಮಿತಿ ತಿಳಿಸಿದೆ. ಮುಂದಿನ ವರ್ಷದಿಂದ ಪಂದ್ಯಾವಳಿಗೆ ಮುರ್ಮು ಅವರ ಹೆಸರಿಡುವ ನಿರ್ಧಾರವನ್ನೂ ಆಯೋಜಕರು ಪ್ರಕಟಿಸಿದ್ದಾರೆ.



