ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಳೆರಾಯ ತನ್ನ ಆಟ ಶುರು ಮಾಡಿದ್ದು, ಕ್ರೀಡಾಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ. ಜಪಾನ್ನ ನಿಶ್ಶಿನ್ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯಬೇಕಿದ್ದ ಹೈ-ವೋಲ್ಟೇಜ್ ಪಂದ್ಯಗಳು ಒಂದೊಂದಾಗಿ ರದ್ದಾಗುತ್ತಿವೆ. ಆದರೆ, ಈ ಮಳೆಯ ನಡುವೆಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪಂದ್ಯವನ್ನಾಡದೆಯೇ ನೇರವಾಗಿ ಸೆಮಿಫೈನಲ್ ಅಖಾಡಕ್ಕೆ ಲಗ್ಗೆಯಿಟ್ಟು ಶುಭಾರಂಭ ಮಾಡಿವೆ.
ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಟಾಸ್ ಹಾಕಲು ಸಹ ಸಾಧ್ಯವಾಗದೇ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ನಿಯಮಾವಳಿಗಳ ಪ್ರಕಾರ, ಪಂದ್ಯ ರದ್ದಾದರೆ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಮುಂಚೂಣಿಯಲ್ಲಿರುವ ತಂಡಕ್ಕೆ ಮುಂದಿನ ಸುತ್ತಿಗೇರುವ ಅವಕಾಶ ಸಿಗುತ್ತದೆ. ಅದರಂತೆ, ರ್ಯಾಂಕಿಂಗ್ನಲ್ಲಿ ಉತ್ತಮ ಸ್ಥಾನದಲ್ಲಿರುವ ‘ಟೀಮ್ ಇಂಡಿಯಾ’ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿತು.
ಇದಕ್ಕೂ ಮುನ್ನ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಇದೇ ಕಥೆ ಪುನರಾವರ್ತನೆಯಾಗಿತ್ತು. ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ನಡುವಣ ಹಣಾಹಣಿಯೂ ಮಳೆಯಿಂದಾಗಿ ರದ್ದಾಯಿತು. ಇಲ್ಲಿಯೂ ಐಸಿಸಿ ರ್ಯಾಂಕಿಂಗ್ ಆಧಾರದಲ್ಲೇ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಇನ್ನುಳಿದ ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಶ್ರೀಲಂಕಾ-ನೇಪಾಳ ಹಾಗೂ ಮಲೇಷ್ಯಾ-ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಈ ಪಂದ್ಯಗಳಲ್ಲಿ ಗೆದ್ದುಬರುವ ತಂಡಗಳು ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಸವಾಲನ್ನು ಎದುರಿಸಲಿವೆ.
ಒಂದು ವೇಳೆ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಮ್ಮ ಎದುರಾಳಿಗಳನ್ನು ಮಣಿಸಿದರೆ, ಅಕ್ಟೋಬರ್ 3 ರಂದು ನಡೆಯಲಿರುವ ಮಹಾ ಫೈನಲ್ ಪಂದ್ಯದಲ್ಲಿ ‘ಚಿನ್ನದ ಪದಕ’ಕ್ಕಾಗಿ ಐತಿಹಾಸಿಕ ಕಾದಾಟ ನಡೆಯಲಿದೆ. ಒಂದು ವೇಳೆ ಎರಡೂ ತಂಡಗಳು ಸೆಮೀಸ್ನಲ್ಲಿ ಮುಗ್ಗರಿಸಿದರೆ, ಅದೇ ಅಕ್ಟೋಬರ್ 3 ರಂದು ನಡೆಯಲಿರುವ ‘ಕಂಚಿನ ಪದಕ’ದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.



