September 28, 2026
Monday, September 28, 2026
spot_img

ಮಾಣಿ ಸಮೀಪ ಭೀಕರ ಅಪಘಾತ: ಉಮ್ರಾ ತರಬೇತಿ ಮುಗಿಸಿ ಮರಳುತ್ತಿದ್ದ ಮಹಿಳೆ ಸಾವು

ಹೊಸದಿಗಂತ ವರದಿ ಬಂಟ್ವಾಳ:

ಇಲ್ಲಿನ‌ ಮಾಣಿ ಸಮೀಪದ ಹಳೀರದ ಫ್ಲೈ ಓವರ್ ಆರಂಭವಾಗುವ ರಸ್ತೆಯ ಮೇಲೆ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ
ಒರ್ವ ಮಹಿಳೆ ಮೃತಪಟ್ಟರೆ, ಮೂವರು ಮಹಿಳೆಯರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ಮಹಿಳೆಯನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಚಾಲಕ ಸೇರಿ ಐವರು ಪ್ರಯಾಣಿಸುತ್ತಿದ್ದರು. ಇದರಲ್ಲಿ ನಾಲ್ವರು ಮಹಿಳಾ ಪ್ರಯಾಣಿಕರಾಗಿದ್ದರು. ಇವರೆಲ್ಲ ಕುಟುಂಬಸ್ಥರಾಗಿದ್ದು, ಉಮ್ರಾ ತರಬೇತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರೆಂದು ಹೇಳಲಾಗಿದೆ.

ಪುತ್ತೂರು, ಮಡಿಕೇರಿ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿರುವ ಹಿನ್ನಲೆಯಲ್ಲಿ ಇಲ್ಲಿ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಹೊರ ಜಿಲ್ಲೆಯಿಂದ ಬರುವವರಿಗೆ ಈ ಸರ್ವಿಸ್ ರಸ್ತೆಯು ಮಡಿಕೇರಿ, ಮೈಸೂರು ಪ್ರವೇಶ ರಸ್ತೆ ಎಂದು ಸರಿಯಾಗಿ ತಿಳಿಯದೆ ವಾಹನ ಚಾಲಕರಲ್ಲಿ ಗೊಂದಲ ಉಂಟಾಗುತ್ತಿದೆ.

ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದಿರುವುದು ಮತ್ತು ಯಾವುದೇ ಸೂಚನಾ ಫಲಕ ಕೂಡಾ ಇಲ್ಲದಿರುವುದು ಗೊಂದಲಗಳಿಗೆ ಕಾರಣವಾಗುತ್ತಿದೆಯೆನ್ನಲಾಗುತ್ತಿದೆ.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Must Read