ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಚಾರ್ಜ್‌ಗೆ ಇಟ್ಟಾಗ ಫೋನ್ ಬಿಸಿಯಾಗುವುದು ಬಹುತೇಕ ಎಲ್ಲರೂ ಎದುರಿಸುವ ಒಂದು ಕಾಮನ್ ಸಮಸ್ಯೆ. ಕೆಲವೊಮ್ಮೆ ಫೋನ್ ಎಷ್ಟು ಬಿಸಿಯಾಗುತ್ತದೆ ಎಂದರೆ, ಅದನ್ನು ಕೈಯಲ್ಲಿ ಹಿಡಿದುಕೊಳ್ಳಲು ಸಹ ಸಾಧ್ಯವಾಗುವುದಿಲ್ಲ. ಹೀಗೆ ಫೋನ್ ಬಿಸಿಯಾಗಲು ಕಾರಣವೇನು? ಇದು ಅಪಾಯಕಾರಿಯೇ? ಇದನ್ನು ತಡೆಯುವುದು ಹೇಗೆ?

ಫೋನ್ ಹೀಟ್ ಆಗೋಕೆ ರೀಸನ್ ಏನು?
ನಮ್ಮ ಫೋನ್‌ಗಳಲ್ಲಿ ‘ಲಿಥಿಯಂ-ಐಯಾನ್’ ಬ್ಯಾಟರಿಗಳನ್ನು ಬಳಸಲಾಗುತ್ತದೆ. ನಾವು ಚಾರ್ಜರ್ ಆನ್ ಮಾಡಿದಾಗ, ವಿದ್ಯುತ್ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಬದಲಾಗಿ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಪ್ರಮಾಣದ ವಿದ್ಯುತ್ ಶಕ್ತಿಯು ‘ಉಷ್ಣ’ ರೂಪದಲ್ಲಿ ಹೊರಬರುತ್ತದೆ. ಇದು ಕಾಮನ್ ಸೈನ್ಸ್.
ಇತ್ತೀಚಿನ ದಿನಗಳಲ್ಲಿ 18W, 65W, ನೂರಕ್ಕೂ ಹೆಚ್ಚು ವ್ಯಾಟ್ ಸಾಮರ್ಥ್ಯದ ‘ಫಾಸ್ಟ್ ಚಾರ್ಜರ್‌ಗಳು’ ಬಂದಿವೆ. ಇವು ಕೇವಲ 20-30 ನಿಮಿಷಗಳಲ್ಲಿ ಬ್ಯಾಟರಿಯನ್ನು ಫುಲ್ ಮಾಡುತ್ತವೆ. ಆದರೆ, ಎಷ್ಟು ವೇಗವಾಗಿ ವಿದ್ಯುತ್ ಹರಿಯುತ್ತದೆಯೋ, ಅಷ್ಟೇ ವೇಗವಾಗಿ ಮತ್ತು ಹೆಚ್ಚಾಗಿ ಉಷ್ಣ ಉತ್ಪತ್ತಿಯಾಗುತ್ತದೆ.

ಫೋನ್ ಚಾರ್ಜ್‌ಗೆ ಇಟ್ಟಾಗಲೂ ಗೇಮ್‌ಗಳು, ಸೋಶಿಯಲ್ ಮೀಡಿಯಾ, ಹೆವಿ ಆ್ಯಪ್‌ಗಳು ಅಥವಾ ಲೊಕೇಷನ್ ರನ್ ಆಗುತ್ತಿದ್ದರೆ, ಪ್ರೊಸೆಸರ್ ವಿಪರೀತ ಕೆಲಸ ಮಾಡುತ್ತದೆ. ಇದರಿಂದಲೂ ಫೋನ್ ಬಿಸಿಯಾಗುತ್ತದೆ.
ಫೋನ್ ಬಿದ್ದಾಗ ಒಡೆಯಬಾರದು ಎಂದು ನಾವು ದಪ್ಪನೆಯ ರಬ್ಬರ್ ಅಥವಾ ಪ್ಲಾಸ್ಟಿಕ್ ಕವರ್ ಹಾಕಿರುತ್ತೇವೆ. ಚಾರ್ಜ್ ಆಗುವಾಗ ಉತ್ಪತ್ತಿಯಾಗುವ ಹೀಟ್ ಹೊರಹೋಗಲು ಜಾಗವಿಲ್ಲದೆ, ಫೋನ್ ಒಳಗಡೆಯೇ ಬಿಸಿಯಾಗುತ್ತದೆ.
ಕಡಿಮೆ ಬೆಲೆಗೆ ಸಿಗುತ್ತದೆ ಎಂದು ನಕಲಿ ಚಾರ್ಜರ್‌ಗಳನ್ನು ಬಳಸಿದರೆ, ಅವು ಸೂಕ್ತ ಪ್ರಮಾಣದ ವೋಲ್ಟೇಜ್ ನಿಯಂತ್ರಿಸುವುದಿಲ್ಲ. ಇದರಿಂದ ಬ್ಯಾಟರಿ ಹಾಳಾಗುವುದಲ್ಲದೆ ಫೋನ್ ಅಪಾಯಕಾರಿ ಮಟ್ಟದಲ್ಲಿ ಬಿಸಿಯಾಗುತ್ತದೆ.

ಈ ಸ್ಮಾರ್ಟ್ ಟಿಪ್ಸ್ ಟ್ರೈ ಮಾಡಿ
ಚಾರ್ಜ್ ಮಾಡುವಾಗ ನಿಮ್ಮ ಮೊಬೈಲ್‌ನ ಕವರ್ ಅನ್ನು ತೆಗೆದಿಡುವುದು ಒಳ್ಳೆಯದು. ಇದರಿಂದ ಹೀಟ್ ಸುಲಭವಾಗಿ ಹೊರಗೆ ಹೋಗುತ್ತದೆ.
ಚಾರ್ಜ್ ಆಗುತ್ತಿರುವಾಗ ಗೇಮ್ ಆಡುವುದು, ಯೂಟ್ಯೂಬ್ ನೋಡುವುದು ಅಥವಾ ಕಾಲ್ ಅಲ್ಲಿ ಮಾತನಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.
ಕಾಲಕಾಲಕ್ಕೆ ಬರುವ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಮಾಡುವುದರಿಂದ ಬ್ಯಾಟರಿ ನಿರ್ವಹಣೆ ಉತ್ತಮವಾಗುತ್ತದೆ.
ಸೂರ್ಯನ ಬೆಳಕು ಬೀಳುವ ಅಥವಾ ಬಿಸಿಯಿರುವ ಸ್ಥಳಗಳಲ್ಲಿ ಫೋನ್ ಚಾರ್ಜ್‌ಗೆ ಇಡಬೇಡಿ.
ಯಾವಾಗಲೂ ಫೋನ್ ಕಂಪನಿಯವರ ಒರಿಜಿನಲ್ ಚಾರ್ಜರ್ ಮತ್ತು ಡೇಟಾ ಕೇಬಲ್ ಅನ್ನೇ ಬಳಸಿ.
ಚಾರ್ಜ್ ಆಗುವಾಗ ಫೋನ್ ಸ್ವಲ್ಪ ಬಿಸಿಯಾಗುವುದು ತೀರಾ ಸಹಜ. ಆದರೆ, ಕೈಯಲ್ಲಿ ಹಿಡಿಯಲು ಸಾಧ್ಯವಾಗದಷ್ಟು ಬಿಸಿಯಾದರೆ, ಅಥವಾ ಫೋನ್ ಉಬ್ಬಿದಂತೆ ಕಂಡರೆ ತಕ್ಷಣ ಚಾರ್ಜರ್ ಅನ್‌ಪ್ಲಗ್ ಮಾಡಿ, ಹತ್ತಿರದ ಸರ್ವಿಸ್ ಸೆಂಟರ್‌ಗೆ ತೋರಿಸುವುದು ಸುರಕ್ಷಿತ.



