September 29, 2026
Tuesday, September 29, 2026
spot_img

150 ರನ್ ಗಳಿಸಿದರೂ ಡಬಲ್ಸ್ ಓಡಲೇಬೇಕು! ಯುವ ಕ್ರಿಕೆಟಿಗರಿಗೆ ಕಠಿಣ ಪರಿಶ್ರಮದ ಪಾಠ ಹೇಳಿದ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಪ್ಲೇಯರ್ ಮೈದಾನಕ್ಕಿಳಿದರೆ ಸಾಕು ದಾಖಲೆಗಳು ತಮ್ಮಷ್ಟಕ್ಕೆ ತಾವೇ ಸಾಲುಗಟ್ಟಿ ನಿಲ್ಲುತ್ತವೆ. ಬ್ಯಾಟ್ ಹಿಡಿದು ಕ್ರೀಸ್‌ಗೆ ಬಂದರೆ ಎದುರಾಳಿ ಬೌಲರ್‌ಗಳ ನಿದ್ದೆಗೆಡುವುದಂತೂ ಖಚಿತ. ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಭಾರತ ಕ್ರಿಕೆಟ್‌ ತಂಡದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ, ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪವರ್ ಏನೆಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಈ ಐತಿಹಾಸಿಕ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೃಹತ್ 15,000 ರನ್‌ಗಳ ಮೈಲಿಗಲ್ಲು ದಾಟಿದ ಕೊಹ್ಲಿ, ಪಂದ್ಯದ ನಂತರ ತಮ್ಮ ಸುದೀರ್ಘ ಕ್ರಿಕೆಟ್ ಪ್ರಯಾಣ, ಬದಲಾದ ಬ್ಯಾಟಿಂಗ್ ಶೈಲಿ, ಯುವ ಆಟಗಾರರ ಹೊಣೆಗಾರಿಕೆ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿಯನ್ನು ದಾಟಿದ ಅಪರೂಪದ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಕೊಹ್ಲಿ, “ನಾನು ಎಂದಿಗೂ ದಾಖಲೆಗಳು ಅಥವಾ ರನ್‌ಗಳ ಸಂಖ್ಯೆಯನ್ನು ಬೆನ್ನತ್ತಿ ಆಡಿದವನಲ್ಲ. ಮೈದಾನಕ್ಕೆ ಇಳಿದಾಗ ತಂಡದ ಪರಿಸ್ಥಿತಿ ಏನಿದೆ ಮತ್ತು ಆ ಕ್ಷಣದಲ್ಲಿ ನನ್ನ ಜವಾಬ್ದಾರಿ ಏನು ಎಂಬುದಷ್ಟೇ ನನ್ನ ತಲೆಯಲ್ಲಿರುತ್ತದೆ. ಜವಾಬ್ದಾರಿಯಿಂದ ಆಡಿದಾಗ ಸಾಧನೆಗಳು ತಾನಾಗಿಯೇ ಹುಡುಕಿ ಬರುತ್ತವೆ. ಸುದೀರ್ಘ ಕಾಲ ಭಾರತವನ್ನು ಪ್ರತಿನಿಧಿಸುವ ಭಾಗ್ಯ ಸಿಕ್ಕಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದರು.

ತಮ್ಮ ನಿರಂತರ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ವಿರಾಟ್, ಕ್ರಿಕೆಟ್ ಎನ್ನುವುದು ಕೇವಲ ಕೌಶಲವಲ್ಲ, ಅದೊಂದು ‘ಮಾನಸಿಕ ಆಟ’ ಎಂದಿದ್ದಾರೆ.

“ನಾನು ನೆಟ್ಸ್‌ನಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ಅಭ್ಯಾಸ ಮಾಡುವ ವ್ಯಕ್ತಿಯಲ್ಲ. ಬದಲಿಗೆ ಮಾನಸಿಕವಾಗಿ ಫ್ರೆಶ್ ಆಗಿರುವುದು ಮತ್ತು ಪ್ರಸ್ತುತ ಕ್ಷಣದಲ್ಲಿ ಜೀವಿಸುವುದು ಮುಖ್ಯ. ಆದರೆ, ಮೈದಾನದಲ್ಲಿ ನಮಗನಿಸಿದಂತೆ ಆಡಲು ದೈಹಿಕ ಫಿಟ್‌ನೆಸ್ ಅತ್ಯಗತ್ಯ. ದೇಹ ಫಿಟ್ ಆಗಿದ್ದರೆ ಮಾತ್ರ ಪಂದ್ಯವನ್ನು ವಿಶ್ಯುಲೈಸ್ ಮಾಡಲು ಮತ್ತು ಅಂದುಕೊಂಡಂತೆ ಮೈದಾನದಲ್ಲಿ ಪ್ರದರ್ಶಿಸಲು ಸಾಧ್ಯ,” ಎಂದು ವಿವರಿಸಿದರು.

ತಂಡದ ಯುವ ಆಟಗಾರರಿಗೆ ಕಠಿಣ ಪರಿಶ್ರಮದ ಪಾಠ ಹೇಳಿದ ಕೊಹ್ಲಿ, “ಮೈದಾನದ ಹೊರಗಿನ ಲೈಮ್‌ಲೈಟ್ ಅಥವಾ ಸೋಶಿಯಲ್ ಮೀಡಿಯಾಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಒಮ್ಮೆ ಮೈದಾನಕ್ಕೆ ಇಳಿದರೆ ಅದೇ ನಿಮ್ಮ ಪ್ರಪಂಚವಾಗಬೇಕು. ನೀವು 150 ರನ್ ಬಾರಿಸಿ ಕ್ರೀಸ್‌ನಲ್ಲಿದ್ದರೂ, ತಂಡಕ್ಕೆ ಅಗತ್ಯವಿದ್ದಾಗ ಓವರ್‌ನಲ್ಲಿ ನಾಲ್ಕು ಡಬಲ್ಸ್ ಓಡಲು ಸಿದ್ಧರಿರಬೇಕು. ಯಾವುದೇ ನೆಪ ಹೇಳದೆ ತಂಡಕ್ಕಾಗಿ ಸಂಪೂರ್ಣ ಶ್ರಮ ಹಾಕಿ” ಎಂದು ಕಿವಿಮಾತು ಹೇಳಿದ್ದಾರೆ.

Must Read