September 29, 2026
Tuesday, September 29, 2026
spot_img

ಏಷ್ಯನ್ ಗೇಮ್ಸ್: ಶೂಟರ್ ನೀರು ಧಂಡಾಗೆ ಚಿನ್ನದ ಗರಿ; ಭಾರತಕ್ಕೆ ಒಲಿದ 5ನೇ ಬಂಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಾರೆ ನೀರು ಧಂಡಾ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಂದು (ಮಂಗಳವಾರ) ನಡೆದ ಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೆ ಭಾರತ ಐದು ಚಿನ್ನದ ಪದಗಳನ್ನು ಪಡೆದುಕೊಂಡಿದೆ.

ಚೀನಾ ವಿರುದ್ಧ ಗೆದ್ದು ಬೀಗಿದ ನೀರು ಧಂಡಾ

ಭಾರತೀಯ ಸೇನೆಯ ಮಾರ್ಕ್ಸ್‌ಮನ್‌ಶಿಪ್ ಯೂನಿಟ್‌ನಲ್ಲಿ ‘ನಾಯಬ್ ಸುಬೇದಾರ್’ ಆಗಿ ಸೇವೆ ಸಲ್ಲಿಸುತ್ತಿರುವ ನೀರು ಧಂಡಾ, ಜಪಾನ್‌ನ ಜಿಟಿಜಿಟಿ ಮಳೆಯ ನಡುವೆಯೂ ಎದೆಗುಂದದೆ ಗುರಿ ಇಟ್ಟರು. ಒಟ್ಟು 8 ಶೂಟರ್‌ಗಳಿದ್ದ ಫೈನಲ್ ಸುತ್ತಿನಲ್ಲಿ 26 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನ ಪಡೆದರು.

 ಚೀನಾದ ಸನ್ ಯುನಾಂಗ್ ಮತ್ತು ಕುವೈತ್‌ನ ಹಜಾರ್ ಅಬ್ದುಲ್ ಮಲಿಕ್ ತಲಾ 21 ಅಂಕಗಳನ್ನು ಪಡೆದುಕೊಂಡರೆ, ಕತಾರ್‌ನ ರೇ ಬಾಸಿಲ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊನೆಯ 25ನೇ ಶಾಟ್‌ನ ವೇಳೆಗೆ ತೀವ್ರ ಪೈಪೋಟಿ ಇದ್ದರೂ, ನೀರು ಧಂಡಾ ತಮ್ಮ ಅದ್ಭುತ ಆಟದ ಮೂಲಕ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು.

ಒಂದೇ ದಿನ ಚಿನ್ನ- ಬೆಳ್ಳಿ ಪದಕದ ಡಬಲ್ ಧಮಾಕಾ

ವೈಯಕ್ತಿಕ ವಿಭಾಗದಲ್ಲಿ ಬಂಗಾರ ಗೆಲ್ಲುವ ಮುನ್ನವೇ, ಇಂದೇ ನಡೆದ ಮಹಿಳೆಯರ ಟ್ರ್ಯಾಪ್ ತಂಡ ವಿಭಾಗದಲ್ಲೂ ನೀರು ಧಂಡಾ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ನೀರು ಧಂಡಾ, ಆಶಿಮಾ ಅಹ್ಲಾವತ್ ಮತ್ತು ಮನೀಷಾ ಕೀರ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡವು ಒಟ್ಟು 328 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಚೀನಾ (346 ಅಂಕ) ಚಿನ್ನ ಗೆದ್ದರೆ, ಕುವೈತ್ (325 ಅಂಕ) ಕಂಚು ಪಡೆಯಿತು.

ಈ ತಂಡ ವಿಭಾಗದಲ್ಲೂ 125 ಶಾಟ್‌ಗಳಲ್ಲಿ 118 ನಿಖರ ಗುರಿ ಇಡುವ ಮೂಲಕ ನೀರು ಧಂಡಾ ಅವರೇ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯಾಗಿದ್ದರು.

ಇದನ್ನೂ ಓದಿ:

ಭಾರತದ ಒಟ್ಟು ಪದಕಗಳ ಪಟ್ಟಿ 47ಕ್ಕೆ ಏರಿಕೆ

ನೀರು ಧಂಡಾ ಅವರ ಈ ಅದ್ಭುತ ಡಬಲ್ ಪದಕದ ಸಾಧನೆಯೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 47ಕ್ಕೆ ತಲುಪಿದೆ. ಇದರಲ್ಲಿ 5 ಚಿನ್ನ, 21 ಬೆಳ್ಳಿ ಮತ್ತು 21 ಕಂಚಿನ ಪದಕಗಳು ಸೇರಿವೆ. ನೀರು ಧಂಡಾ ಅವರ ಈ ಸಾಧನೆಗೆ ದೇಶಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

Must Read