September 29, 2026
Tuesday, September 29, 2026
spot_img

ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ ಅಪಹರಣ: ದಾವಣಗೆರೆಯಲ್ಲಿ 10 ಮಂದಿಯ ಗ್ಯಾಂಗ್ ಅರೆಸ್ಟ್

ಹೊಸದಿಗಂತ ವರದಿ ದಾವಣಗೆರೆ:

ಶ್ರೀಮಂತ ಯುವಕರನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದ 10 ಜನ ಅಪಹರಣಕಾರರ ತಂಡವನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇರೆ ರಾಜ್ಯಗಳಿಂದ ಕಾಲೇಜು ವ್ಯಾಸಂಗಕ್ಕೆಂದು ಬಂದಿದ್ದ ಗಂಗಾರಾಮ್ ಪವಾರ್ ಅಲಿಯಾಸ್ ಬಬ್ಲು ಇಡೀ ಅಪಹರಣಕಾರರ ತಂಡದ ಪ್ರಮುಖನಾಗಿದ್ದು, ಈತನೂ ಸೇರಿದಂತೆ 10 ಜನ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಬೇರೆ ರಾಜ್ಯ, ಊರಿನವರಾಗಿದ್ದು, ದಾವಣಗೆರೆಯ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದವರಾಗಿದ್ದಾರೆ. ಶ್ರೀಮಂತ ಯುವಕರನ್ನೇ ಗುರಿಯಾಗಿಸಿಕೊಂಡು, ಅಪಹರಿಸುತ್ತಿದ್ದ ಈ ಗುಂಪು ನಂತರ ಹಣಕ್ಕೆ ಬೇಡಿಕೆ ಇಡುತ್ತಿತ್ತು ಎನ್ನಲಾಗಿದೆ.

ಎರಡು ಸಾವಿರ ಮುಖಬೆಲೆಯ ಪಿಂಕ್ ನೋಟ್ ಗಳನ್ನು ಬದಲಾಯಿಸುತ್ತೇವೆ, ಹಣಕಾಸಿನ ವಿಚಾರ ಮಾತನಾಡುವುದಿದೆ ಅಂತೆಲ್ಲಾ ಶ್ರೀಮಂತ ಕುಟುಂಬಗಳ ಯುವಕರನ್ನು ಅಪಹರಣಕಾರರು ತಮ್ಮಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ನಗರದ 26 ವರ್ಷದ ಬಟ್ಟೆ ವ್ಯಾಪಾರಿ ಅಬ್ಬಾಸ್ ಎಂಬಾತನನ್ನು ಸೆ.9ರಂದು ಅಪಹರಿಸಿದ್ದ ಗಂಗಾರಾಂ ಅಲಿಯಾಸ್ ಬಬ್ಲು ಗ್ಯಾಂಗ್ ಹಣ ತರಿಸಿಕೊಡುವಂತೆ ಹಲ್ಲೆ ನಡೆಸಿತ್ತು. ಶಾಮನೂರು ಸಮುದಾಯ ಭವನದ ಬಳಿ ಕಾರಿನಲ್ಲಿ ಬಂದಿದ್ದ ನಾಲ್ವರು ಯುವಕರು ಬಲವಂತವಾಗಿ ಅಬ್ಬಾಸ್ ನನ್ನು ಕಾರಿನಲ್ಲಿ ಕೂರಿಸಿಕೊಂಡು, ಆಂಜನೇಯ ಬಡಾವಣೆಯ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದರು. ನಿನ್ನ ತಂದೆಗೆ ಹೇಳಿ 10 ಲಕ್ಷ ರೂ. ತರಿಸಿಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ:

ಅಪಹರಣಕ್ಕೊಳಗಾದ ವ್ಯಾಪಾರಿ ಯುವಕ ನಿತ್ಯವೂ ತನ್ನ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಮೊಬೈಲ್ ಲೈವ್ ಲೊಕೇಷನ್ ಶೇರ್ ಮಾಡುತ್ತಿದ್ದ ಆಧಾರದಲ್ಲಿ ಆತನ ಕುಟುಂಬದವರು ಆಂಜನೇಯ ಬಡಾವಣೆಯಲ್ಲಿ ಹುಡುಕಾಟ ನಡೆಸಿದ್ದರು. ಜನ ಸೇರಿದ್ದನ್ನು ಕಂಡ ಅಪಹರಣಕಾರರ ಗ್ಯಾಂಗ್ ಬಟ್ಟೆ ವ್ಯಾಪಾರಿಯನ್ನು ಬಿಟ್ಟು ಪರಾರಿಯಾಗಿತ್ತು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೂರಾಮ್ ಪವಾರ್ ಅಲಿಯಾಸ್ ಬಬ್ಲು ಸೇರಿದಂತೆ 10 ಜನರ ಗ್ಯಾಂಗ್ ನ್ನು ಬಂಧಿಸಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದ್ದೇವೆ. ಬಂಧಿತರಿಂದ ಕಾರು, ಮೊಬೈಲ್ ಜಪ್ತು ಮಾಡಿ, ಆರೋಪಿಗಳ ಹಿನ್ನೆಲೆ ಕುರಿತಂತೆ ಮತ್ತಷ್ಟು ತನಿಖೆ ತೀವ್ರಗೊಳಿಸಿದ್ದೇವೆ ಎಂದು ಎಸ್ಪಿ ಡಾ.ಹೆಚ್.ಟಿ.ಶೇಖರ್ ತಿಳಿಸಿದ್ದಾರೆ.

Must Read