ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಉಪ್ಪು ಸೇವನೆ, ಹೊಟೇಲ್ ಹಾಗೂ ಶಾಲೆಗಳಲ್ಲಿ ಉಪ್ಪಿನ ಬಳಕೆ ಹೇಗೆ ಮಾಡಬೇಕು ಎಂದು ಸೂಚಿಸುವ ಗೈಡ್‌ಲೈನ್ಸ್‌ನ್ನು ಆರೋಗ್ಯ ಇಲಾಖೆ ರಿಲೀಸ್ ಮಾಡಿದೆ. ಇದೀಗ ಅಡುಗೆ ಎಣ್ಣೆಯ ಸರದಿಯಾಗಿದ್ದು, ಶೀಘ್ರದಲ್ಲಿಯೇ ಅಡುಗೆ ಎಣ್ಣೆ ಬಳಕೆಯ ಗೈಡ್‌ಲೈನ್ಸ್ ರಿಲೀಸ್ ಆಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಗಮನಹರಿಸುತ್ತಿದ್ದು, ಅವರ ಸುರಕ್ಷತೆಗಾಗಿ ಪಣ ತೊಟ್ಟಿದೆ. ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಜಂಟಿಯಾಗಿ ಹೊಸ ಮಾರ್ಗಸೂಚಿಯನ್ನು ರೂಪಿಸುತ್ತಿವೆ. ಪದೇ ಪದೆ ಬಿಸಿ ಮಾಡಿ ಬಳಕೆ ಮಾಡಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದಾಗ ಜನರಿಗೆ ಕೊಲೆಸ್ಟ್ರಾಲ್, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸುತ್ತವೆ. ರಾಜ್ಯವನ್ನು ಆರೋಗ್ಯವಾಗಿಡಲು ಸರ್ಕಾರ ನಿರ್ಧರಿಸಿದೆ.
ಹೊಸ ಮಾರ್ಗಸೂಚಿಯಲ್ಲಿ ಏನೆಲ್ಲಾ ಇರಬಹುದು?
ಒಂದು ಬಾರಿ ಎಣ್ಣೆಯ ಪ್ಯಾಕ್ ಓಪನ್ ಮಾಡಿ ಬಾಣಲೆಗೆ ಸುರಿದ ನಂತರ ಹೆಚ್ಚೆಂದರೆ ಅದನ್ನು ಮೂರು ಬಾರಿ ಮಾತ್ರ ಬಳಕೆ ಮಾಡಬೇಕು. ಅದಾದ ನಂತರ ಅದರಲ್ಲಿ ಕರಿದ ಪದಾರ್ಥ ತಿನ್ನಲು ಸೇಫ್ ಇಲ್ಲ.
ಮೂರು ಬಾರಿಗೂ ಹೆಚ್ಚು ಕರಿದ ಎಣ್ಣೆಯಲ್ಲಿ ಟೋಟಲ್ ಪೋಲಾರ್ ಕಾಂಪೌಂಡ್ಸ್ ಹೆಚ್ಚಿರುತ್ತದೆ. ಇದು ಶೇ. 25ಕ್ಕಿಂತ ಹೆಚ್ಚಾದರೆ ಹಾರ್ಟ್ ಅಟ್ಯಾಕ್, ಕ್ಯಾನ್ಸರ್, ಕೊಲೆಸ್ಟ್ರಾಲ್ ಗ್ಯಾರಂಟಿ.
ಎಣ್ಣೆಯಿಂದ ಬೂದು, ನೀಲಿ ಅಥವಾ ಕಪ್ಪು ಹೊಗೆ, ನೊರೆ ಕಾಣಿಸಿಕೊಂಡ ನಂತರ ಅದನ್ನು ಬಳಕೆ ಮಾಡುವಂತಿಲ್ಲ. ಒಮ್ಮೆ ಓಪನ್ ಮಾಡಿದ ಎಣ್ಣೆ ಪ್ಯಾಕೆಟ್ ಒಂದರಿಂದ ಎರಡು ದಿನ ಮಾತ್ರ ಬಳಕೆ ಮಾಡಬಹುದು.
ಹೊಟೇಲ್‌ಗಳಲ್ಲಿ ಎಣ್ಣೆ ಪ್ಯಾಕ್ ಓಪನ್ ಮಾಡಿದ ದಿನಾಂಕ, ಎಷ್ಟು ದಿನ ಬಳಕೆ ಆಗಿದೆ, ಹೇಗೆ ವಿಲೇವಾರಿ ಆಗಿದೆ ಎನ್ನುವ ಮಾಹಿತಿಗೆ ದಾಖಲೆ ಇಡಬೇಕು. ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ.
ಬಳಸಿದ ಎಣ್ಣೆಯ ಮರುಬಳಕೆಗೆ ಮಾಸ್ಟರ್ ಪ್ಲಾನ್
ಬಳಸಿದ ಎಣ್ಣೆಯನ್ನು ಚರಂಡಿ, ಸಿಂಕ್ ಅಥವಾ ಡ್ರೈನೇಜ್‌ಗೆ ಚಲ್ಲುವುದರಿಂದ ಪರಿಸರ ಹಾಳಾಗುತ್ತದೆ. ಹೀಗಾಗಿ ರೀಪರ್ಪಸ್ ಯೂಸ್ಡ್ ಕುಕ್ಕಿಂಗ್ ಆಯಿಲ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ನಿಮ್ಮ ಹೊಟೇಲ್, ರೆಸ್ಟೋರೆಂಟ್ ಹಾಗೂ ಮನೆಗಳಲ್ಲಿ ಇರುವ ಉಳಿದ ಎಣ್ನೆಯನ್ನು ವಾರ್ಡ್‌ಮಟ್ಟದಲ್ಲಿ ಸಂಗ್ರಹ ಮಾಡಿ ಬಯೋಗ್ಯಾಸ್ ಹಾಗೂ ಬಯೋ ಡಿಸೇಲ್ ಕಂಪನಿಗಳಿಗೆ ತಲುಪಿಸಲಾಗುತ್ತದೆ. ಮನೆಯ ಮುಂದೆ ಕಸದ ಗಾಡಿ ಬರುವಂತೆ ಎಣ್ಣೆಯ ಗಾಡಿ ಬರುತ್ತದೆ ಅದಕ್ಕೆ ಉಳಿದ ಎಣ್ಣೆಯನ್ನು ನೀಡಿ ಪರಿಸರ ಪ್ರಜ್ಞೆ ಮೆರೆಯಬೇಕಿದೆ.



