September 30, 2026
Wednesday, September 30, 2026
spot_img

ಆಡುವ ಆಸೆ ಇತ್ತು, ಆದರೆ..: ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಹಿಂದಿನ ಕಹಿ ಸತ್ಯ ಬಿಚ್ಚಿಟ್ಟ ಮೊಹಮ್ಮದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಹಾಗೂ ಜಗತ್ತಿನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿತ್ತು. ಆದರೆ, ಅವರ ಈ ನಿವೃತ್ತಿ ಹಿಂದೆ ಮ್ಯಾನೇಜ್‌ಮೆಂಟ್‌ನ ಅಸಹಕಾರ ಹಾಗೂ ಆಂತರಿಕ ಅಪನಂಬಿಕೆಯ ಕಹಿ ಸತ್ಯ ಅಡಗಿದೆ ಎಂಬ ಹೊಸ ವಿಚಾರವನ್ನು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಬಹಿರಂಗಪಡಿಸಿದ್ದಾರೆ.

ಮ್ಯಾನೇಜ್‌‌ಮೆಂಟ್‌ನಿಂದ ಸಿಗಲಿಲ್ಲ ಗೌರವ

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, “ಯಾವುದೇ ಒಬ್ಬ ಶ್ರೇಷ್ಠ ಆಟಗಾರನ ವೃತ್ತಿಜೀವನದಲ್ಲಿ ಫಾರ್ಮ್ ಎಂಬುದು ಏರಿಳಿತ ಕಾಣುವುದು ತೀರ ಸಾಮಾನ್ಯ. ಆದರೆ ವಿರಾಟ್ ಕೊಹ್ಲಿಯಂತಹ ದೈತ್ಯ ಆಟಗಾರನನ್ನು ಟೀಮ್ ಮ್ಯಾನೇಜ್‌ಮೆಂಟ್ ನಡೆಸಿಕೊಂಡ ರೀತಿ ತೀರಾ ಖಂಡನೀಯ. ಕೊಹ್ಲಿ ನೀಡಿದ ಸಂದರ್ಶನಗಳನ್ನು ಗಮನಿಸಿದರೆ ಅವರ ಮನಸ್ಸಿನಲ್ಲಿದ್ದ ತೀವ್ರ ಬೇಸರ ಎದ್ದು ಕಾಣುತ್ತಿತ್ತು. ತಂಡದ ಒಳಗಿದ್ದ ಪ್ರಮುಖರೇ ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಮ್ಯಾನೇಜ್‌ಮೆಂಟ್ ಬೆಂಬಲ ಸಿಗದೆ ಕೊಹ್ಲಿ ಸಂಪೂರ್ಣವಾಗಿ ಒಂಟಿಯಾಗಿದ್ದರು” ಎಂದು ಮ್ಯಾನೇಜ್‌‌ಮೆಂಟ್‌ ಮೇಲೆ ಆರೋಪ ಮಾಡಿದ್ದಾರೆ.

ಕ್ರಿಕೆಟ್ ಅಂದ್ರೆ ವಿಡಿಯೋ ಗೇಮ್ ಅಲ್ಲ

ಆಸ್ಟ್ರೇಲಿಯಾ ಪ್ರವಾಸದ ವೇಳೆ ಎದುರಾದ ಹಿನ್ನಡೆಯನ್ನು ಪ್ರಸ್ತಾಪಿಸಿದ ಕೈಫ್, ಆಯ್ಕೆ ಸಮಿತಿ ಹಾಗೂ ಮ್ಯಾನೇಜ್‌ಮೆಂಟ್‌ನ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು. “ವಿರಾಟ್ ಕೊಹ್ಲಿ ನಿನ್ನೆ-ಮೊನ್ನೆ ಬಂದ ಹೊಸ ಆಟಗಾರನಲ್ಲ. ಆಸ್ಟ್ರೇಲಿಯಾದಲ್ಲಿ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆದ ಮಾತ್ರಕ್ಕೆ ಅವರ ಸಾಮರ್ಥ್ಯವನ್ನು ಶಂಕಿಸುವುದು ಎಷ್ಟರ ಮಟ್ಟಿಗೆ ಸರಿ? ಆಟಗಾರರು ಮಷೀನ್‌ಗಳಲ್ಲ, ಕ್ರಿಕೆಟ್ ವಿಡಿಯೋ ಗೇಮ್‌ ಕೂಡ ಅಲ್ಲ. ಕೊಹ್ಲಿಗೆ ಇನ್ನೂ ಟೆಸ್ಟ್ ಪಂದ್ಯಗಳನ್ನು ಆಡುವ ಆಸೆ ಇತ್ತು. ಆದರೆ ಬಲವಂತವಾಗಿ ಅವರನ್ನು ನಿವೃತ್ತಿ ಪಡೆಯುವಂತಹ ಕಠಿಣ ವಾತಾವರಣವನ್ನು ನಿರ್ಮಿಸಲಾಯಿತು. ಮ್ಯಾನೇಜ್‌ಮೆಂಟ್ ಸರಿಯಾದ ಬೆಂಬಲ ನೀಡಿದ್ದರೆ ಕೊಹ್ಲಿ ಖಂಡಿತವಾಗಿಯೂ ಅದ್ಭುತವಾಗಿ ಕಂಬ್ಯಾಕ್ ಮಾಡುತ್ತಿದ್ದರು,” ಎಂದು ಕೈಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಮನಸ್ಸಿಗೆ ಪೆಟ್ಟು ನೀಡಿದ ಆ ‘ಷರತ್ತು’

ವರದಿಗಳ ಪ್ರಕಾರ, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಆಯ್ಕೆ ಸಮಿತಿಯು ಕೊಹ್ಲಿ ಮುಂದೆ ಷರತ್ತೊಂದನ್ನು ಇಟ್ಟಿತ್ತು. “ನೀವು ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿ, ಅದರಲ್ಲಿ ನಿಮ್ಮ ಫಾರ್ಮ್ ನೋಡಿಕೊಂಡು ಮುಂದಿನ ಪಂದ್ಯಗಳಿಗೆ ಆಯ್ಕೆ ಮಾಡುತ್ತೇವೆ,” ಎಂದು ಆಯ್ಕೆ ಮಂಡಳಿ ಹೇಳಿತ್ತು. ದಶಕಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸಿದ ನಾಯಕನಿಗೆ ಇಂತಹ ಅಪನಂಬಿಕೆಯ ಮಾತುಗಳು ತೀವ್ರ ನೋವು ಉಂಟುಮಾಡಿದವು. ಇಂತಹ ವಾತಾವರಣದಲ್ಲಿ ಮುಂದುವರಿಯಲು ಇಷ್ಟಪಡದ ಕೊಹ್ಲಿ, ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದರು ಎನ್ನಲಾಗಿದೆ.

ಒಟ್ಟಿನಲ್ಲಿ, ವಿರಾಟ್ ಕೊಹ್ಲಿ ಅವರ ಈ ದಿಢೀರ್ ನಿವೃತ್ತಿಯು ಕ್ರಿಕೆಟ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಮಾಜಿ ಆಟಗಾರರಲ್ಲೂ ದೊಡ್ಡ ಮಟ್ಟದ ಚರ್ಚೆ ಹಾಗೂ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ ಹುಟ್ಟುಹಾಕಿದೆ.

Must Read