September 30, 2026
Wednesday, September 30, 2026
spot_img

ಮುಂಬೈನ ಹೊಟೇಲ್‌ವೊಂದರ ಮಸಾಲೆ ದೋಸೆ ಪಲ್ಯದಲ್ಲಿ ಸತ್ತ ಇಲಿ ಪತ್ತೆ: ವಾಂತಿ ಮಾಡಿಕೊಂಡ ಗ್ರಾಹಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂಬೈನ ಜನಪ್ರಿಯ ಹೊಟೇಲ್‌ನಲ್ಲಿ ಗ್ರಾಹಕ ಆರ್ಡರ್‌ ಮಾಡಿದ ಮಸಾಲೆ ದೋಸೆಯ ಪಲ್ಯದೊಳಗೆ ಸತ್ತ ಇಲಿ ಸಿಕ್ಕಿದ್ದು, ಗ್ರಾಹಕ ಅಲ್ಲಿಯೇ ವಾಂತಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೊಗಳು ವೈರಲ್‌ ಆದ ನಂತರ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ತ್ವರಿತ ಕ್ರಮ ಕೈಗೊಂಡು ಹೊಟೇಲ್‌ನ ಲೈಸೆನ್ಸ್‌ ರದ್ದುಗೊಳಿಸಿದೆ.

ಬೊರಿವಲಿ ಪಶ್ಚಿಮ ಭಾಗದಲ್ಲಿರುವ ರಾಧಾಕೃಷ್ಣ ಹೊಟೇಲ್‌ಗೆ ಅಮಿತ್‌ ತ್ರಿವೇದಿ ಎನ್ನುವ ಗ್ರಾಹಕರು ತಮ್ಮ ಮಗ ಹಾಗೂ ಸಹೋದರರ ಜೊತೆ ತೆರಳಿದ್ದಾರೆ. ದಕ್ಷಿಣ ಭಾರತದ ತಿಂಡಿಗಳು ಅವರಿಗೆ ಇಷ್ಟವಾಗುವ ಕಾರಣ ಮಸಾಲೆ ದೋಸೆಯನ್ನು ಆರ್ಡರ್‌ ಮಾಡಿದ್ದಾರೆ.

ಒಂದೆರಡು ತುತ್ತು ತಿಂದ ನಂತರ ಪಲ್ಯದಲ್ಲಿ ಸತ್ತ ಇಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಕಂಡ ತಕ್ಷಣ ತ್ರಿವೇದಿ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ತಕ್ಷಣ ವಾಂತಿ ಮಾಡಿಕೊಂಡಿದ್ದಾರೆ. ನಂತರ ತ್ರಿವೇದಿ ಅವರು ಬೊರಿವಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಈ ದೂರಿನ ವಿವರಗಳನ್ನು ಆಹಾರ ಸುರಕ್ಷತಾ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಫ್‌ಡಿಎ ಅಧಿಕಾರಿಗಳ ತಂಡ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಡುಗೆ ಕೋಣೆಯಲ್ಲಿ ನೈರ್ಮಲ್ಯದ ಗಂಭೀರ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ರಾಧಾಕೃಷ್ಣ ಹೋಟೆಲ್‌ನ ವ್ಯಾಪಾರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.

Must Read