ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿವಾಸಿ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿ (‘ಜನಜಾತೀಯ ಗೌರವ ದಿವಸ’) ಹಾಗೂ ಜಾರ್ಖಂಡ್ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಆವರಣದಲ್ಲಿರುವ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಉಪಸ್ಥಿತರಿದ್ದು, ಬುಡಕಟ್ಟು ಮಹಾನಾಯಕನಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಬುಡಕಟ್ಟು ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸಂದೇಶ
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, “ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ದೇಶವಾಸಿಗಳ ಪರವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ. ‘ಧರ್ತಿ ಆಬಾ’ ಅವರ ಅಪ್ರತಿಮ ಧೈರ್ಯ, ಹೋರಾಟ ಮತ್ತು ತ್ಯಾಗವು ಸ್ವಾಭಿಮಾನ ಹಾಗೂ ಹಕ್ಕುಗಳ ರಕ್ಷಣೆಗೆ ಪ್ರತಿಯೊಂದು ಪೀಳಿಗೆಗೂ ಸ್ಫೂರ್ತಿಯಾಗಿದೆ. ಅವರ ಆದರ್ಶದಂತೆ ನಮ್ಮ ಬುಡಕಟ್ಟು ಸಹೋದರ-ಸಹೋದರಿಯರ ಗೌರವ ಮತ್ತು ಸಮೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಇಂದು ವರ್ಚುವಲ್ ಮೂಲಕವೂ ಜನಜಾತೀಯ ಗೌರವ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂದೇಶ ಹಂಚಿಕೊಂಡಿದ್ದು, “ಜನಜಾತೀಯ ಗೌರವ ದಿವಸದ ಶುಭಾಶಯಗಳು. ನಮ್ಮ ಶ್ರೀಮಂತ ಬುಡಕಟ್ಟು ಪರಂಪರೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಆದಿವಾಸಿ ನಾಯಕರು ನೀಡಿದ ಐತಿಹಾಸಿಕ ಕೊಡುಗೆಯನ್ನು ಸ್ಮರಿಸುವ ದಿನವಿದು. ಅಮೂಲ್ಯ ಪರಂಪರೆಯನ್ನು ಉಳಿಸಿಕೊಂಡು ನಾವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯೋಣ” ಎಂದಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿಗಳ ಕಚೇರಿಯೂ ರಾಜ್ಯದ ಜನತೆಗೆ ಸಂಸ್ಥಾಪನಾ ದಿನದ ಶುಭಾಶಯ ಕೋರಿದೆ.
ಬಿರ್ಸಾ ಮುಂಡಾ ಅವರ ಹೋರಾಟದ ಹಿನ್ನೆಲೆ
1875ರ ನವೆಂಬರ್ 15ರಂದು ಜನಿಸಿದ ಬಿರ್ಸಾ ಮುಂಡಾ ಅವರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಬುಡಕಟ್ಟು ಸಮುದಾಯವನ್ನು ಸಂಘಟಿಸಿ ಪ್ರಬಲ ಹೋರಾಟ ನಡೆಸಿದ್ದರು. ‘ಅಬುವಾ ದಿಶುಮ್, ಅಬುವಾ ರಾಜ್’ ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ಅವರನ್ನು ಜನರು ಪ್ರೀತಿಯಿಂದ ‘ಧರ್ತಿ ಆಬಾ’ ಎಂದು ಗೌರವಿಸುತ್ತಾರೆ. ಇವರ ಜನ್ಮದಿನದ ಸ್ಮರಣಾರ್ಥವಾಗಿಯೇ 2000 ದ ನವೆಂಬರ್ 15ರಂದು ಬಿಹಾರದಿಂದ ಬೇರ್ಪಟ್ಟು ಜಾರ್ಖಂಡ್ ರಾಜ್ಯ ಅಸ್ತಿತ್ವಕ್ಕೆ ಬಂದಿತು.



