November 15, 2026
Sunday, November 15, 2026
spot_img

ಬೆಂಗಳೂರಿನಲ್ಲಿ ವಿದೇಶಿ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗೆ ವಿರೋಧ: ಚಾಲಕರಿಗೆ ಆತಂಕ, ಪ್ರಯಾಣಿಕರಿಗೆ ನೆಮ್ಮದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸಾರಿಗೆ ವಲಯದಲ್ಲಿ ಈಗ ಹೊಸದೊಂದು ವಿವಾದ ಭುಗಿಲೆದ್ದಿದೆ. ವಿಯೆಟ್ನಾಂ ಮೂಲದ ‘ವಿನ್‌ಗ್ರೂಪ್’ ಸಂಸ್ಥೆಯು ತನ್ನದೇ ಮಾಲೀಕತ್ವದ ‘ಗ್ರೀನ್ ಎಸ್‌ಎಂ’ ಎಂಬ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯನ್ನು ನಗರದಲ್ಲಿ ಆರಂಭಿಸಲು ಮುಂದಾಗಿದೆ. ಆದರೆ, ಈ ವಿದೇಶಿ ಕಂಪನಿಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

8 ಲಕ್ಷ ಕುಟುಂಬಗಳ ಬದುಕಿಗೆ ಆತಂಕ

ನಗರದಲ್ಲಿ ಸುಮಾರು ಎಂಟು ಲಕ್ಷ ಕುಟುಂಬಗಳು ಆಟೋ ಮತ್ತು ಟ್ಯಾಕ್ಸಿ ವೃತ್ತಿಯನ್ನೇ ನಂಬಿ ಬದುಕುತ್ತಿವೆ. ಸಾಮಾನ್ಯ ಚಾಲಕರು ಬ್ಯಾಂಕ್ ಅಥವಾ ಫೈನಾನ್ಸ್‌ಗಳಲ್ಲಿ ಸಾಲ ಮಾಡಿ ವಾಹನ ಖರೀದಿಸಿರುತ್ತಾರೆ. ಪ್ರತಿದಿನದ ದುಡಿಮೆಯಿಂದಲೇ ವಾಹನದ ಇಎಂಐ, ವಿಮೆ, ಪರ್ಮಿಟ್, ನಿರ್ವಹಣೆ ಮತ್ತು ಇಂಧನದ ವೆಚ್ಚವನ್ನು ಭರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಯೇ ಸ್ವಂತ ವಾಹನಗಳನ್ನು ರಸ್ತೆಗಿಳಿಸಿದರೆ ಸ್ವತಂತ್ರ ಚಾಲಕರ ಬದುಕು ಬೀದಿಗೆ ಬೀಳಲಿದೆ ಎಂಬುದು ಒಕ್ಕೂಟದ ಪ್ರಮುಖ ಆತಂಕವಾಗಿದೆ.

ಚಾಲಕರು ಅಸಹಾಯಕರು

ಗ್ರೀನ್ ಎಸ್‌ಎಂ ಕಂಪನಿಯು ದೊಡ್ಡ ಮಟ್ಟದ ಬಂಡವಾಳ ಹೊಂದಿದ್ದು, ಸಗಟು ದರದಲ್ಲಿ ವಾಹನಗಳನ್ನು ಖರೀದಿಸುವ ಸಾಮರ್ಥ್ಯ ಹೊಂದಿದೆ. ತನ್ನದೇ ಆದ ಆ್ಯಪ್ ಹಾಗೂ ನಿರ್ವಹಣಾ ವ್ಯವಸ್ಥೆಯ ಮೂಲಕ ಆರಂಭದಲ್ಲಿ ನಷ್ಟವಾದರೂ ಸಹಿಸಿಕೊಂಡು ಅತಿ ಕಡಿಮೆ ದರಕ್ಕೆ ಸೇವೆ ನೀಡಬಹುದು. ಇದರಿಂದಾಗಿ ಸ್ಥಳೀಯ ಚಾಲಕರು ಅನಿವಾರ್ಯವಾಗಿ ದರ ಕಡಿಮೆ ಮಾಡಬೇಕಾಗುತ್ತದೆ, ಇಲ್ಲವೇ ಸಾಲ ಕಟ್ಟಲಾಗದೆ ವೃತ್ತಿಯನ್ನೇ ತೊರೆಯಬೇಕಾಗುತ್ತದೆ ಎಂದು ಒಕ್ಕೂಟ ಎಚ್ಚರಿಸಿದೆ.

ಒಕ್ಕೂಟದ ಪ್ರಮುಖ ಬೇಡಿಕೆಗಳೇನು?

ವಿದೇಶಿ ಕಂಪನಿಯ ವಾಹನಗಳ ಸಂಖ್ಯೆಯನ್ನು ಕೇವಲ 100ಕ್ಕೆ ಸೀಮಿತಗೊಳಿಸಬೇಕು, ಅವುಗಳ ಪರವಾನಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಮತ್ತು ಪ್ರಯಾಣ ದರದ ಮೇಲೆ ಸರ್ಕಾರ ನಿಗಾ ಇಡಬೇಕು ಎಂದು ಚಾಲಕರ ಒಕ್ಕೂಟ ಒತ್ತಾಯಿಸಿದೆ.

ಪ್ರಯಾಣಿಕರ ಬೆಂಬಲ ಯಾರಿಗೆ?

ಒಂದೆಡೆ ಚಾಲಕರು ಪ್ರತಿಭಟನೆಯ ಹಾದಿ ಹಿಡಿದಿದ್ದರೆ, ಮತ್ತೊಂದೆಡೆ ಬೆಂಗಳೂರಿನ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕಂಪನಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. “ಆಟೋ ಚಾಲಕರು ನಾವು ಕರೆದ ಕಡೆ ಬರುವುದಿಲ್ಲ, ಬಂದರೂ ಮೀಟರ್ ಹಾಕುವುದಿಲ್ಲ. ನಗರಕ್ಕೆ ಇನ್ನಷ್ಟು ಹೊಸ ಕ್ಯಾಬ್ ಕಂಪನಿಗಳು ಬರುವುದರಿಂದ ಪೈಪೋಟಿ ಹೆಚ್ಚಾಗಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ಸಿಗುತ್ತದೆ” ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಚಾಲಕರ ಹಿತರಕ್ಷಣೆ ಮತ್ತು ಪ್ರಯಾಣಿಕರ ಅನುಕೂಲದ ನಡುವೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Must Read

Skip to toolbar