ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲ್ಯದಲ್ಲಿ ಐದು ರೂಪಾಯಿ ಹಿಡಿದುಕೊಂಡು ಅಂಗಡಿಗೆ ಓಡಿಹೋಗಿ ‘ಪಾರ್ಲೆ-ಜಿ’ ಬಿಸ್ಕೆಟ್ ಪೊಟ್ಟಣ ತಂದ ನೆನಪು ಪ್ರತಿಯೊಬ್ಬರಿಗೂ ಇರುತ್ತದೆ. ಬೆಳಗಿನ ಬಿಸಿ ಬಿಸಿ ಟೀ ಜೊತೆಗೆ ಈ ಬಿಸ್ಕೆಟ್ ಅದ್ದಿ ತಿನ್ನುವ ಮಜವೇ ಬೇರೆ. ಕಾಲ ಬದಲಾದಂತೆ ಮಾರುಕಟ್ಟೆಗೆ ನೂರಾರು ನಮೂನೆಯ, ವಿಧವಿಧದ ಬಿಸ್ಕೆಟ್ಗಳು ಬಂದಿರಬಹುದು, ಕೆಲವರು ಇದನ್ನು ಸಾಮಾನ್ಯ ಬಿಸ್ಕೆಟ್ ಎಂದು ಹಗುರವಾಗಿ ಕಾಣಬಹುದು. ಆದರೆ, ಇಂದಿಗೂ ಸಣ್ಣ ಹಳ್ಳಿಯ ಪೆಟ್ಟಿ ಅಂಗಡಿಯಿಂದ ಹಿಡಿದು ದೊಡ್ಡ ನಗರಗಳ ಹೈಫೈ ಮಾರ್ಟ್ ಗಳವೆರೆಗೂ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಏಕೈಕ ಬಿಸ್ಕೆಟ್ ಎಂದರೆ ಅದು ಪಾರ್ಲೆ-ಜಿ.

ಈ ಬಿಸ್ಕೆಟ್ ಈಗ ಗಡಿ ದಾಟಿ ವಿದೇಶಿಯರ ಮನಸ್ಸನ್ನೂ ತಲುಪಿದೆ. ಹೌದು, ಕೆನಡಾ ಮೂಲದ ಮಹಿಳೆಯೊಬ್ಬರು ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕೆಟ್ ಸವಿದು, ಅದರ ರುಚಿಗೆ ಸಂಪೂರ್ಣವಾಗಿ ಮನಸೋತಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಭಾರತೀಯ ನೆಟ್ಟಿಗರ ಬಾಲ್ಯದ ಸುಂದರ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
‘ವೆಗ್ ಮೊಮೋ’ ಎಂಬ ಜನಪ್ರಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೆನಡಿಯನ್ ಮಹಿಳೆಯ ಮುಂದೆ ಭಾರತದ ಪ್ರಸಿದ್ಧ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೇಜ್ ಇಟ್ಟಿರುವುದನ್ನು ಕಾಣಬಹುದು. ಕುತೂಹಲದಿಂದಲೇ ಬಿಸ್ಕೆಟ್ ತೆಗೆದು ಸವಿಯುವ ಆಕೆ, ಅದರ ರುಚಿ ನೋಡಿ ಆಶ್ಚರ್ಯ ಹಾಗೂ ಸಂತಸದಿಂದ “ಖಂಡಿತವಾಗಿಯೂ ಇದರ ರುಚಿ ಅತ್ಯುತ್ತಮವಾಗಿದೆ” ಎನ್ನುವಂತೆ ಮುಖದಲ್ಲಿ ಅದ್ಭುತ ರಿಯಾಕ್ಷನ್ ನೀಡುತ್ತಾಳೆ. ಭಾರತೀಯರ ಸಾಂಪ್ರದಾಯಿಕ ಸ್ನ್ಯಾಕ್ ಒಂದಕ್ಕೆ ವಿದೇಶಿ ಮಹಿಳೆ ನೀಡಿದ ಈ ಸರಳ ಹಾಗೂ ಪ್ರಾಮಾಣಿಕ ಪ್ರತಿಕ್ರಿಯೆ ಈಗ ನೆಟ್ಟಿಗರ ಹೃದಯ ಗೆದ್ದಿದೆ.

ಈ ವಿಡಿಯೋ ಈಗಾಗಲೇ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಮೆಂಟ್ ಸೆಕ್ಷನ್ನಲ್ಲಿ ಭಾರತೀಯ ನೆಟ್ಟಿಗರು ತಮ್ಮ ಬಾಲ್ಯದ ಸವಿನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಒಬ್ಬ ಬಳಕೆದಾರರು, “ಪಾರ್ಲೆ-ಜಿ ಬಿಸ್ಕೆಟ್ ಅನ್ನು ನೀರು ಅಥವಾ ಚಹಾದಲ್ಲಿ ಅದ್ದಿ ತಿಂದರೆ ಸಿಗುವ ಸುಖವೇ ಬೇರೆ, ಅದೇ ಬೆಸ್ಟ್ ಕಾಂಬಿನೇಷನ್” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, “ಈ ಬಿಸ್ಕೆಟ್ನ ರುಚಿ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು, ಇದರ ಮೌಲ್ಯ ತಿಳಿದವರೇ ಬಲ್ಲರು” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಜಗತ್ತು ಎಷ್ಟೇ ಆಧುನಿಕವಾದರೂ, ಎಷ್ಟೇ ಹೊಸ ತರಹದ ಖಾದ್ಯಗಳು ಮಾರುಕಟ್ಟೆಗೆ ಬಂದರೂ, ಸರಳತೆ ಮತ್ತು ಸಾಂಪ್ರದಾಯಿಕ ರುಚಿಗೆ ಎಂದಿಗೂ ಸೋಲಿಲ್ಲ ಎಂಬುದಕ್ಕೆ ಈ ವೈರಲ್ ವಿಡಿಯೋವೇ ಸಾಕ್ಷಿ. ಸಾಧಾರಣ ಜನರ ಬಿಸ್ಕೆಟ್ ಎಂದೇ ಪ್ರಸಿದ್ಧಿಯಾಗಿದ್ದ ‘ಪಾರ್ಲೆ-ಜಿ’, ಇಂದು ವಿದೇಶಿಯರ ಮನಸ್ಸನ್ನೂ ತಲುಪಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ.



