September 30, 2026
Wednesday, September 30, 2026
spot_img

No UPI dayಗೆ ಕರೆಕೊಟ್ಟ ರಿಟೇಲ್‌ ಮಾರಾಟಗಾರರು: ಅ.2ರಂದು ಬರೀ ಕ್ಯಾಶ್‌ ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲ್ಲಿಗೆ ಹೋದರೂ ಕ್ಯಾಶ್‌ ಇಲ್ಲ ಅಂದ್ರೆ ಏನಾಯ್ತು ಕೈಯಲ್ಲಿ ಫೋನ್‌ ಇದೆಯಲ್ಲಾ ಎಂದುಕೊಂಡೇ ಮುಂದೆ ಸಾಗುತ್ತೀವಿ. ಚಿಲ್ಲರೆ ಇಲ್ಲ ಎಂದು ಅಂಗಡಿಯವರು ಹೇಳಿದರೆ ಕ್ಯಾಶ್‌ ವಾಪಾಸ್‌ ತೆಗೆದುಕೊಂಡು ಯುಪಿಐ ಮಾಡಿಬಿಡ್ತೀವಿ. ಯುಪಿಐ ಜನರ ಅವಿಭಾಜ್ಯ ಅಂಗವಾಬಿಟ್ಟಿದೆ.

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ರೀಟೇಲ್ ಮಾರಾಟಗಾರರು ಯುಪಿಐ ಪೇಮೆಂಟ್ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮೊಬೈಲ್ ರೀಟೇಲ್ ಮಾರಾಟಗಾರರ ಸಂಸ್ಥೆ ‘ನೋ ಯುಪಿಐ ಡೇ’ No UPI day ಗೆ ಕರೆ ನೀಡಿದೆ. ಗ್ರಾಹಕ ಉತ್ಪನ್ನ ವಿತರಕರ ಒಕ್ಕೂಟ ಸಂಘಟನೆಯು ಈ ಕರೆಯನ್ನು ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಅಂಗಡಿ ಮುಂಗಟ್ಟುಗಳು ಹಾಗೂ ಮೊಬೈಲ್ ಸ್ಟೋರ್​ಗಳು ಅಕ್ಟೋಬರ್ 2ರಂದು ಯುಪಿಐ ಪೇಮೆಂಟ್ ಸ್ವೀಕರಿಸುವ ಸಾಧ್ಯತೆ ಕಡಿಮೆ. ಗ್ರಾಹಕರು ಕೈಯಲ್ಲಿ ಕ್ಯಾಷ್ ಅಥವಾ ಕಾರ್ಡ್ ಹಿಡಿದು ಹೋಗಬೇಕಾಗಬಹುದು.

ವರ್ತಕರಿಗೆ ಯುಪಿಐ ಮೂಲಕ ಮಾಡಲಾಗುವ 2,000 ರೂಗಿಂತ ಹೆಚ್ಚಿನ ಮೌಲ್ಯದ ಪೇಮೆಂಟ್ ಮೇಲೆ ಶೇ. 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇದು ಅಕ್ಟೋಬರ್ 15ರಿಂದ ಜಾರಿಗೆ ಬರುತ್ತದೆ. ಈ ಕ್ರಮದ ವಿರುದ್ಧ ಪ್ರತಿಭಟನೆಯಾಗಿ ನೋ ಯುಪಿಐ ಡೇ ಗೆ ಕರೆ ನೀಡಲಾಗಿದೆ.

ಅಕ್ಟೋಬರ್ 2, ಶುಕ್ರವಾರದಂದು ಪ್ರತಿಭಟನೆಯ ಭಾಗವಾಗಿ ಅಂಗಡಿಗಳಲ್ಲಿರುವ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಯಾವುದೇ ಯುಪಿಐ ಆನ್‌ಲೈನ್ ಪಾವತಿಗಳನ್ನು ಗ್ರಾಹಕರಿಂದ ಸ್ವೀಕರಿಸುವುದಿಲ್ಲ ಹೀಗಾಗಿ ಕ್ಯಾಶ್‌ ಅಥವಾ ಕಾರ್ಡ್‌ ತೆಗೆದುಕೊಂಡು ಓಡಾಡುವುದು ಉತ್ತಮ ನಿರ್ಧಾರವಾಗಲಿದೆ.

Must Read