ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಗೆ ಪ್ರವೇಶಕ್ಕೆ ವಿಧಿಸಲಾಗಿರುವ ನಿರ್ಬಂಧ ಆದೇಶಕ್ಕೆ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಕ್ಷೇಪ ವ್ಯಕ್ತಪಡಿಸಿದ್ದು,ಇದು ತಮ್ಮ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಹೊಸ ದಿಗಂತದೊಂದಿಗೆ ಮಾತನಾಡಿದ ಅವರು,ಸಂವಿಧಾನದ ಆರ್ಟಿಕಲ್ 11 ಮತ್ತು 21ರ ಆಶಯದಂತೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೇಶದ ಯಾವುದೇ ಭಾಗಕ್ಕೆ ತೆರಳುವ ಹಾಗೂ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಹಕ್ಕು ಇದೆ.ಇವರು ಬಂದರೆ ಗಲಭೆ ಆಗಬಹುದು ಎಂಬ ಊಹಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಮುಂಚಿತವಾಗಿಯೇ ಒಬ್ಬ ವ್ಯಕ್ತಿಯ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವ ಮುನ್ನ ನೈಸರ್ಗಿಕ ನ್ಯಾಯದ ತತ್ವ ಪಾಲಿಸಬೇಕಿತ್ತು ಎಂದು ಅವರು ಹೇಳಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55ರ ಅಡಿಯಲ್ಲಿ ನಿರ್ಬಂಧ ವಿಧಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ಶೋಕಾಸ್ ನೋಟಿಸ್ ನೀಡಿ, ಜಿಲ್ಲೆಗೆ ಪ್ರವೇಶ ನಿಷೇಧಿಸಬಾರದು ಎಂಬುದಕ್ಕೆ ಕಾರಣ ಕೇಳಬೇಕಿತ್ತು. ಆಗ ತಾವು ಯಾವುದೇ ಪ್ರಚೋದನಕಾರಿ ಮಾತುಗಳನ್ನಾಡುವುದಿಲ್ಲ ಹಾಗೂ ಕೇವಲ ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವುದಾಗಿ ಸ್ಪಷ್ಟನೆ ನೀಡಬಹುದಾಗಿತ್ತು ಎಂದು ತಿಳಿಸಿದ್ದಾರೆ.
ತಮ್ಮ ಅಭಿಪ್ರಾಯ ಅಥವಾ ಸ್ಪಷ್ಟೀಕರಣ ಕೇಳದೆ, ಕಾರ್ಯಕ್ರಮದ ಮುನ್ನಾದಿನವೇ ಮನೆಗೆ ಬಂದು ನೋಟಿಸ್ ಅಂಟಿಸಿರುವುದು ಸರಿಯಾದ ಕಾನೂನು ಪ್ರಕ್ರಿಯೆಯಲ್ಲ ಎಂದು ಅವರು ಟೀಕಿಸಿದ್ದಾರೆ. ಇದು ಬ್ರಿಟಿಷರ ಕಾಲದ ಆಡಳಿತ ಕ್ರಮವನ್ನು ನೆನಪಿಸುವಂತಿದ್ದು, ಆ ಕಾಲದ ಪೊಲೀಸರೂ ಇಷ್ಟೊಂದು ಕಾನೂನು ಉಲ್ಲಂಘನೆ ಮಾಡುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಲಬುರಗಿ ನಗರ ಪ್ರವೇಶ ನಿರ್ಬಂಧ ಆದೇಶದ ಹಿನ್ನೆಲೆಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಈ ಪ್ರತಿಕ್ರಿಯೆ ನೀಡಿದ್ದಾರೆ.ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ಸಹ ಅವರು ಸುಳಿವು ನೀಡಿದ್ದಾರೆ.



