ಹೊಸ ದಿಗಂತ ವರದಿ ಉಳ್ಳಾಲ:
ಮಸೀದಿಗೆ ತೆರಳಲೆಂದು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ರಾ.ಹೆ 66ರ ಕುಂಪಲ ಬೈಪಾಸ್ ಎಂಬಲ್ಲಿ ನಡೆದಿದೆ.
ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ಹನೀಫ್ ವಲಿ ಮಹಮ್ಮದ್ (68)ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ಹನೀಫ್, ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಕುಂಪಲ ಬೈಪಾಸಿನ ಡಿ ಮಾರ್ಟ್ ಮಳಿಗೆಗೆ ಭೇಟಿ ನೀಡಿದ ಬಳಿಕ ಹೆದ್ದಾರಿ ಬದಿಯ ಮಸೀದಿಗೆ ತೆರಳಲೆಂದು ರಸ್ತೆ ದಾಟುತ್ತಿದ್ದ ವೇಳೆ ತಲಪಾಡಿಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಬಿಎಮ್ ಡಬ್ಲ್ಯು ಕಾರೊಂದು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಹನೀಫ್ ಅವರಿಗೆ ಮಂಗಳೂರಿಗೆ ಧಾವಿಸುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
ರಕ್ತದ ಮಡುವಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಹನೀಫ್ ಅವರನ್ನ ಸ್ಥಳೀಯರು ಅಪಘಾತ ನಡೆಸಿದ್ದ ಕಾರೊಂದರಲ್ಲೇ ಹಾಕಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಹನೀಫ್ ಅವರಿಗೆ ಢಿಕ್ಕಿ ಹೊಡೆದ ಎರಡೂ ಕಾರುಗಳ ಚಾಲಕರು ವೈದ್ಯರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಓರ್ವ ಹೆಣ್ಣು, ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೆದ್ದಾರಿ ದುರವಸ್ಥೆಗೆ ಇನ್ನೆಷ್ಟು ಬಲಿ..?
ಕಳೆದ ಜುಲೈ.28 ರ ರಾತ್ರಿ ಕುಂಪಲ ಬೈಪಾಸ್ ಸಮೀಪದ ಅಂಬಿಕಾರೋಡ್ ಎಂಬಲ್ಲಿ ಹೆದ್ದಾರಿ ಬದಿಯ ಕೊರಗಜ್ಜನ ಕಟ್ಟೆಗೆ ದೀಪ ಬೆಳಗಿಸಿ ಮನೆಗೆ ಹಿಂತಿರುಗಲೆಂದು ಹೆದ್ದಾರಿ ದಾಟುತ್ತಿದ್ದ 72ರ ವೃದ್ಧ ದಾಮೋದರ ಪೂಜಾರಿ ಎಂಬವರಿಗೆ ಅಪರಿಚಿತ ಕಾರೊಂದು ರಭಸದಿಂದ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಎರಡೂ ಕಾಲುಗಳನ್ನ ಮುರಿದುಕೊಂಡಿದ್ದ ದಾಮೋದರ್ ಅವರು ಸಾವನ್ನಪ್ಪಿದ್ದರು. ಅವೈಜ್ನಾನಿಕ ಹೆದ್ದಾರಿಯ ವಿಭಜಕದಲ್ಲಿ ದಾರಿ ದೀಪಗಳಿಲ್ಲದೆ ವಾಹನ ಸವಾರರಿಗೆ ರಾತ್ರಿ ವೇಳೆ ಹೆದ್ದಾರಿ ರಸ್ತೆ ದಾಟುವ ಪಾದಚಾರಿಗಳು ಗೋಚರಿಸದೆ ನಿರಂತರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಿಭಜಕಗಳಿಗೆ ತಡೆಬೇಲಿ ಅಳವಡಿಸದ ಪರಿಣಾಮ ಜನಸಾಮಾನ್ಯರು ಎಲ್ಲೆಂದರಲ್ಲಿ ಹೆದ್ದಾರಿ ದಾಟುತ್ತಿದ್ದಾರೆ. ಹೆದ್ದಾರಿ ಬದಿಗಳಿಗೆ ಇನ್ನೂ ಸರ್ವಿಸ್ ರಸ್ತೆಗಳ ನಿರ್ಮಾಣವೂ ಆಗದ ಪರಿಣಾಮ ಅಪಘಾತಗಳು ಜಾಸ್ತಿಯಾಗುತ್ತಲೇ ಇವೆ.



