ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಬಸ್ ನಿಲ್ದಾಣದಲ್ಲಿ ಕಾರವಾರದ ಆಟೋರಿಕ್ಷಾ ಚಾಲಕನ ಕಿಸೆಯಲ್ಲಿದ್ದ ಹಣ ಕಳ್ಳತನ ಮಾಡಿ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿತರು ಟವೆರಾ ವಾಹನದಲ್ಲಿ ಬಂದಿದ್ದು ಇವರೆಲ್ಲ ಅಂತರ್ ಜಿಲ್ಲಾ ಕಳ್ಳರ ಗ್ಯಾಂಗಿನ ಸದಸ್ಯರು ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ಗೋಪನಕೊಪ್ಪ ಸಿದ್ಧರಾಮೇಶ್ವರ ನಗರದ ನಿವಾಸಿ ರಾಘವೇಂದ್ರ ರತ್ನಾಕರ ಜಮಖಂಡಿ, ಹುಬ್ಬಳ್ಳಿಯ ಬನ್ನಿಮಹಾಕಾಳಿ ನಗರದ ನಿವಾಸಿಗಳಾದ ಮಹೇಶ ಸಾತಪ್ಪ ಕಾಳೆ,ಅಣ್ಣಪ್ಪ ಮಾರುತಿ ಮತ್ತಿಕಟ್ಟಿ,ಹುಬ್ಬಳ್ಳಿ ಗಂಗಾಧರನಗರ ನಿವಾಸಿಗಳಾದ ರಾಘವೇಂದ್ರ ರಮೇಶ ನಾಗವೇಕರ್, ರಾಕೇಶ ಮಧುಕರ ಗುಂಜಾಳ ಮತ್ತು ಮಂಜುನಾಥ ಬಸವರಾಜ ದೊಡ್ಮನಿ ಬಂಧಿತ ಆರೋಪಿಗಳಾಗಿದ್ದು ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಕೆ.ಎ25ಪಿ8949 ನೋಂದಣಿ ಸಂಖ್ಯೆಯ ಟವೆರಾ ವಾಹನ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 19 ರಂದು ಮದ್ಯಾಹ್ನ ತಾಲೂಕಿನ ಕೇಣಿ ನಿವಾಸಿ ಪ್ರದೀಪ ಕೇಣಿ ಎನ್ನುವವರು ತಮ್ಮ ಕುಟುಂಬದ ಜೊತೆ ಕಾರವಾರಕ್ಕೆ ಹೋಗಲು ಅಂಕೋಲಾ ಬಸ್ ನಿಲ್ದಾಣದಲ್ಲಿ ಬಸ್ ಏರುತ್ತಿರುವ ಸಂದರ್ಭದಲ್ಲಿ ಅವರ ಗಮನ ಬೇರೆ ಕಡೆ ಸೆಳೆದು ಪ್ಯಾಂಟಿನ ಕಿಸೆಯಲ್ಲಿದ್ದ 7500 ರೂಪಾಯಿ ಹಣ ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ಪ್ರದೀಪ್ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಿಶೇಷ ತಂಡ ರಚಿಸಿ ಕಾರ್ಯಪೃವೃತ್ತರಾದ ಅಂಕೋಲಾ ಪೊಲೀಸರು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಬಸ್ ನಿಲ್ದಾಣದ ಬಳಿ ಆರೋಪಿತರನ್ನು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ನೀಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎಂ.ಎನ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ,ಡಿ. ವೈ.ಎಸ್.ಪಿ ಬಿ.ಎಸ್.ಲೋಕಾಪುರ ಇವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕರುಗಳಾದ ವಿಶ್ವನಾಥ ನಿಂಗೊಳಿ,ಲಲಿತಾ ರಜಪೂತ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿದ್ದು
ತನಿಖೆ ಮುಂದುವರಿದಿದೆ.
ಬಸ್ ನಿಲ್ದಾಣದಲ್ಲಿ ಹಣ ಕದ್ದ ಅಂತರ್ಜಿಲ್ಲಾ ಕಳ್ಳರ ಗ್ಯಾಂಗ್ ಅರೆಸ್ಟ್; ಆರು ಮಂದಿ ಬಂಧನ
ಸಾಂದರ್ಭಿಕ ಚಿತ್ರ



