September 30, 2026
Wednesday, September 30, 2026
spot_img

ಹೆರಿಗೆ ಬೆನ್ನಲ್ಲೇ ಪತ್ನಿ ಸಾ*ವು: ಹಸುಗೂಸನ್ನು ಎತ್ತಿಕೊಂಡು ಪತಿ ಪರಾರಿ, ಮೃತಳ ಕುಟುಂಬಸ್ಥರ ಆಕ್ರಂದನ

ಹೊಸದಿಗಂತ ವರದಿ ದಾವಣಗೆರೆ:

ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಹಸುಗೂಸನ್ನು ಎತ್ತಿಕೊಂಡು ಪತಿ ಪರಾರಿಯಾಗಿದ್ದು, ಮೃತಳ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಇಲ್ಲಿನ ಇಂದಿರಾ ನಗರದ ನಿವಾಸಿ ಬಸಮ್ಮ(27 ವರ್ಷ) ಮೃತ ಮಹಿಳೆ. ತಾಲೂಕಿನ ಬೇತೂರು ಗ್ರಾಮದ ನಿಂಗರಾಜ ಎಂಬಾತನನ್ನು 5 ವರ್ಷಗಳ ಹಿಂದೆ ಬಸಮ್ಮ ಪ್ರೀತಿಸಿದ್ದು, ಅಂತರ್ಜಾತಿಯಾಗಿದ್ದರೂ ಬಸಮ್ಮನ ಕುಟುಂಬಸ್ಥರು ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು. ನಿಂಗರಾಜ, ಬಸಮ್ಮ ದಂಪತಿಗೆ 3 ವರ್ಷದ ಮುದ್ದಾದ ಹೆಣ್ಣು ಮಗುವಿದ್ದು, ಮದುವೆಯಾದ ಆರಂಭದ ಇಬ್ಬರೂ ಸಂತೋಷದಿಂದಲೇ ಇದ್ದರು. ಕಳೆದೆರೆಡು ವರ್ಷದಿಂದ ದುಶ್ಚಟಕ್ಕೆ ದಾಸನಾಗಿದ್ದ ಆಟೋ ಚಾಲಕ ನಿಂಗರಾಜ ತವರುಮನೆಯಿಂದ ಹಣ ತರುವಂತೆ ನಿತ್ಯವೂ ಬಸಮ್ಮಳಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಮಗಳ ಬಾಳು ಚನ್ನಾಗಿದ್ದರೆ ಸಾಕೆಂದು ಬಸಮ್ಮಳ ತಂದೆ, ತಾಯಿ ತಮ್ಮ ಮನೆ ಅಡವಿಟ್ಟು, ಹಣ ಕೊಡಿಸಿದ್ದರಂತೆ. ಹಣ ತಂದರೂ ಪತ್ನಿ ಬಸಮ್ಮಳ ಮೇಲೆ ನಿಂಗರಾಜ ಕ್ರೌರ್ಯ ಮೆರೆಯುತ್ತಿದ್ದ. ತಲೆ ನೋವಿನಿಂದ ಬಳಲುತ್ತಿದ್ದ ಬಸಮ್ಮ 2ನೇ ಸಲ ಗರ್ಭಿಣಿಯಾಗಿದ್ದರೂ ಮತ್ತೆ ಮಾರಣಾಂತಿಕ ಹಲ್ಲೆ ಮಾಡಿದ್ದ ಎಂದು ಮೃತಳ ಕುಟುಂಬಸ್ಥರು ದೂರಿದ್ದಾರೆ.

ಗಂಭೀರ ಹಲ್ಲೆಗೊಳಗಾಗಿದ್ದ ಬಸಮ್ಮಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಸಮ್ಮಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಸೆ.24ರಂದು ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು, ಸೆ.28ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಬಳಿಕ ಮೃತದೇಹವನ್ನು ಅಂಬ್ಯುಲೆನ್ಸ್ ನಲ್ಲಿ ದಾವಣಗೆರೆಗೆ ತಂದ ಪತಿ ನಿಂಗರಾಜ ಪಾರ್ಥೀವ ಶರೀರವನ್ನು ಬಸಮ್ಮಳ ತಾಯಿ ಜೊತೆಗೆ ತವರುಮನೆಗೆ ಕಳಿಸಿದ್ದಾನೆ. ಆಸ್ಪತ್ರೆ ದಾಖಲಾತಿ ಸಮೇತ ನಿಂಗರಾಜ ಹಸುಗೂಸಿನ ಸಮೇತ ನಾಪತ್ತೆಯಾಗಿದ್ದಾನೆ.

ಇಂದಿರಾ ನಗರದ ತಮ್ಮ ಮನೆಯ ಮುಂದೆ ಮೃತಳ ಹೆತ್ತವರು, ಅಣ್ಣ ಸೇರಿದಂತೆ ಕುಟುಂಬಸ್ಥರು ಶವವನ್ನು ಇಟ್ಟುಕೊಂಡ ನ್ಯಾಯಕ್ಕಾಗಿ ಪರದಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಪೊಲೀಸರು ಅಲೆದಾಡಿಸಿದ್ದಾರೆ. ಮೃತಳ ಸಹೋದರಿ ಮಂಜಮ್ಮ ಮಂಗಳವಾರ ರಾತ್ರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಬುಧವಾರ ಮೃತ ಬಸಮ್ಮಳ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ:

 ತುಂಬು ಗರ್ಭಿಣಿ ಮೇಲೆ ನಿಂಗರಾಜನು ಹಲ್ಲೆ ಮಾಡಿದ್ದರಿಂದಲೇ ಬಸಮ್ಮ ಮೃತಪಟ್ಟಿದ್ದಾಳೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಮೃತ ಬಸಮ್ಮಳ ಮಕ್ಕಳನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ನಿಂಗರಾಜ ಹಾಗೂ ನವಜಾತ ಶಿಶುವಿಗಾಗಿ ಹುಡುಕಾಟ ನಡೆಸಿದ್ದಾರೆ.

Must Read