ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ಎ ತಂಡವು ನೇಪಾಳ ವಿರುದ್ಧ 306 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅಕ್ಷರಶಃ ಅಬ್ಬರಿಸಿ ಭಾನುವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ತಿಲಕ್ ವರ್ಮಾ, ಕುಮಾರ್ ಕುಶಾಗ್ರ ಭರ್ಜರಿ ಶತಕ
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಅಭಿಮಾನಿಗಳ ಭಾರೀ ನಿರೀಕ್ಷೆ ಮೂಡಿಸಿದ್ದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಹಾಗೂ ಮೂರನೇ ಕ್ರಮಾಂಕದ ಆಯುಷ್ ಬದೋನಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಭಾರತ 42 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ನಾಯಕ ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ನೇಪಾಳ ಬೌಲರ್‌ಗಳ ಬೆವರಿಳಿಸಿದರು. ಪಿಚ್ ಪರಿಸ್ಥಿತಿಯನ್ನು ಅರಿತು ಎಚ್ಚರಿಕೆಯಿಂದ ಆಡಿದ ಈ ಜೋಡಿ 4ನೇ ವಿಕೆಟ್‌ಗೆ ಬರೋಬ್ಬರಿ 206 ರನ್‌ಗಳ ಅಮೋಘ ಜೊತೆಯಾಟವಾಡಿತು. ಕುಶಾಗ್ರ 117 ರನ್ ಸಿಡಿಸಿ ಮಿಂಚಿದರೆ, ನಾಯಕ ತಿಲಕ್ 107 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಕೊನೆಯ ಓವರ್‌ಗಳಲ್ಲಿ ನೇಪಾಳ ಬೌಲರ್‌ಗಳು ಕೆಲವು ವಿಕೆಟ್ ಪಡೆದರೂ, ಸೂರ್ಯಾಂಶ್ ಶೆಡ್ಗೆ ಕೇವಲ 14 ಎಸೆತಗಳಲ್ಲಿ ಅಜೇಯ 36 ರನ್ ಚಚ್ಚುವ ಮೂಲಕ ಭಾರತದ ಮೊತ್ತವನ್ನು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 332 ರನ್‌ಗಳಿಗೆ ಕೊಂಡೊಯ್ದರು.
26 ರನ್‌ಗಳಿಗೆ ಕುಸಿದ ನೇಪಾಳ
333 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸಂದೀಪ್ ಲಮಿಚಾನೆ ನಾಯಕತ್ವದ ನೇಪಾಳ ತಂಡಕ್ಕೆ ಭಾರತದ ವೇಗಿಗಳು ಸಿಂಹಸ್ವಪ್ನವಾಗಿ ಕಾಡಿದರು. ಪ್ರಿನ್ಸ್ ಯಾದವ್ ಮತ್ತು ಹರ್ಷಿತ್ ರಾಣಾ ಅವರ ಬೌಲಿಂಗ್ ದಾಳಿಗೆ ನೇಪಾಳ ಬ್ಯಾಟರ್‌ಗಳ ಬಳಿ ಉತ್ತರವೇ ಇರಲಿಲ್ಲ. ಪ್ರತಿ ಓವರ್‌ನಲ್ಲೂ ವಿಕೆಟ್ ಕಳೆದುಕೊಂಡ ನೇಪಾಳ ಕೇವಲ 11.3 ಓವರ್‌ಗಳಲ್ಲಿ 26 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಪರ ಬೌಲಿಂಗ್ ನಡೆಸಿದ ಪ್ರಿನ್ಸ್ ಯಾದವ್ 5 ವಿಕೆಟ್ ಪಡೆದರೆ, ಹರ್ಷಿತ್ ರಾಣಾ 4 ವಿಕೆಟ್ ಕಬಳಿಸಿದರು. ಉಳಿದೊಂದು ವಿಕೆಟ್ ಶಹಬಾಜ್ ಅಹ್ಮದ್ ಪಾಲಾಯಿತು. ಈ ಮೂಲಕ ನೇಪಾಳ ‘ಲಿಸ್ಟ್-ಎ’ ಕ್ರಿಕೆಟ್ ಇತಿಹಾಸದಲ್ಲೇ 5ನೇ ಅತಿ ಕಡಿಮೆ ಮೊತ್ತ ದಾಖಲಿಸಿದ ಅವಮಾನಕ್ಕೆ ಗುರಿಯಾಯಿತು. ಭಾರತ ‘ಎ’ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ರನ್‌ಗಳ ಅಂತರದ ಗೆಲುವು ದಾಖಲಿಸಿ ಸಂಭ್ರಮಿಸಿತು. ನವೆಂಬರ್ 22ರ ಭಾನುವಾರ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.



