ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ, ಅಪರೂಪದ ಪಂದ್ಯಕ್ಕೆ ಗುವಾಹಟಿಯ ಬಾರ್ಸಾಪಾರ ಮೈದಾನ ಸಾಕ್ಷಿಯಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಆಟವಾಗಿರಲಿಲ್ಲ. ಬೌಲರ್‌ಗಳನ್ನು ದಂಡಿಸಿದ ಎರಡೂ ತಂಡಗಳ ಬ್ಯಾಟರ್‌ಗಳು ಮೈದಾನದಲ್ಲಿ ರನ್‌ಗಳ ಮಳೆಯನ್ನೇ ಹರಿಸಿದ್ದು, ಇಡೀ ಪಂದ್ಯವು ಸಾಲು ಸಾಲು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಯಿತು.
5 ಶತಕಗಳ ಮಹಾ ಧಮಾಕ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ 50 ವರುಷಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಮಹತ್ತರ ದಾಖಲೆಯೊಂದು ಈ ಪಂದ್ಯದಲ್ಲಿ ನಿರ್ಮಾಣವಾಯಿತು. ಹಳೆಯ ದಾಖಲೆಗಳನ್ನು ಅಳಿಸಿಹಾಕಿ, ಬರೋಬ್ಬರಿ 5 ಶತಕಗಳು ದಾಖಲಾದವು.
ವಿಂಡೀಸ್ ಟಾಪ್-3 ಅಬ್ಬರ
ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರ ಜಾನ್ ಕ್ಯಾಂಪ್ಬೆಲ್ (101 ರನ್), ನಾಯಕ ಶಾಯ್ ಹೋಪ್ (104 ರನ್) ಮತ್ತು ಅದ್ಭುತ ಫಾರ್ಮ್‌ನಲ್ಲಿರುವ ಅಮೀರ್ ಜಾಂಗೂ (114 ರನ್) ಶತಕ ಬಾರಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಪರ ಹಿಟ್‌ಮ್ಯಾನ್ ರೋಹಿತ್ ಶರ್ಮಾ (101 ರನ್) ಮತ್ತು ನಾಯಕ ಶುಭ್ಮನ್ ಗಿಲ್ (ಅಜೇಯ 223 ರನ್) ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿ ಈ ಅಭೂತಪೂರ್ವ ದಾಖಲೆಗೆ ಕಾರಣರಾದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಮೂವರು ಬ್ಯಾಟರ್‌ಗಳು ಶತಕ ಗಳಿಸಿ ಅಬ್ಬರಿಸಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೊದಲ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ ಅಪರೂಪದ ದಾಖಲೆಯ ಪಟ್ಟಿಗೆ ವೆಸ್ಟ್ ಇಂಡೀಸ್ ಸೇರ್ಪಡೆಯಾಯಿತು. ಈ ಮೂವರ ಭರ್ಜರಿ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ದ್ವಿಶತಕದ ವಿಶ್ವ ದಾಖಲೆ
406 ರನ್‌ಗಳ ಬೆನ್ನಟ್ಟುವಿಕೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಭಾರತದ ನಾಯಕ ಶುಭ್ಮನ್ ಗಿಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಫೋರ್‌ಗಳ ಮಳೆ ಹರಿಸಿದರು. ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಗಿಲ್, ಕೇವಲ 117 ಎಸೆತಗಳಲ್ಲಿ ದ್ವಿಶತಕ (200) ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಜಗತ್ತಿನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
400+ ರನ್ ಚೇಸ್
ವೆಸ್ಟ್ ಇಂಡೀಸ್ ನೀಡಿದ 406 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾ ತೀರಾ ಸುಲಭ ಎಂಬಂತೆ ಬೆನ್ನಟ್ಟಿತು. ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರ ಪ್ರಥಮ ವಿಕೆಟ್‌ಗೆ ಬಂದ 255 ರನ್‌ಗಳು ಹಾಗೂ ಕೊನೆಯಲ್ಲಿ ಋತುರಾಜ್ ಗಾಯಕ್ವಾಡ್ ನೀಡಿದ ಬೆಂಬಲದಿಂದ ಭಾರತ ಕೇವಲ 43.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 406 ರನ್ ಬಾರಿಸಿ ಜಯಭೇರಿ ಬಾರಿಸಿತು.
ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 400ಕ್ಕೂ ಹೆಚ್ಚು ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದ ವಿಶ್ವದ 2ನೇ ತಂಡ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಲ್ಲದೆ 39 ಎಸೆತಗಳು ಬಾಕಿ ಇರುವಂತೆಯೇ ಈ ಸಾಧನೆ ಮಾಡಿರುವುದು ಭಾರತದ ಆಕ್ರಮಣಕಾರಿ ಬ್ಯಾಟಿಂಗ್ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.



