October 1, 2026
Thursday, October 1, 2026
spot_img

ಬೆಂಗಳೂರಿಗರಿಗೆ ಮಳೆ ಬೇಕು, ಆದರೆ ತೊಂದರೆ ಬೇಡ! 10 ಕಿ.ಮೀ ಸಾಗೋದಕ್ಕೆ ಮೂರು ಗಂಟೆ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೂರು ದಿನಗಳಿಂದ ಸಂಜೆ ಬೆಂಗಳೂರಿನಲ್ಲಿ ಧೋ ಎಂದು ಮಳೆ ಸುರಿಯುತ್ತಲೇ ಇದೆ. ಇಷ್ಟು ದಿನಗಳಿಂದ ಬೇರೆ ಊರುಗಳಲ್ಲಿ ಮಾತ್ರ ಮಳೆ ಬೀಳುತ್ತಿದೆ, ನಮ್ಮಲ್ಲಿ ಮಾತ್ರ ಇಲ್ಲ ಅಂದುಕೊಳ್ತಿದ್ದ ಬೆಂಗಳೂರಿಗರಿಗೆ ವರುಣ ಕರುಣೆ ತೋರಿಸಿದ್ದಾನೆ. ಆದರೆ ಇದೀಗ ಕರುಣೆಯೇ ಜಾಸ್ತಿಯಾಯ್ತು ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಮೂರು ದಿನ ಬಿದ್ದ ಮಳೆಗೆ ಇಡೀ ಸಿಟಿ ಕೆರೆಯಂತಾಗಿದೆ. ವಾಹನಗಳು ಬೋಟ್‌ನಂತೆ ಮಂದಗತಿಯಲ್ಲಿ ಸಾಗುತ್ತಿದ್ದು, ಬರೀ ಹತ್ತು ಕಿಲೋಮೀಟರ್‌ ಕ್ರಮಿಸೋದಕ್ಕೆ ಮೂರು ಗಂಟೆ ಸಮಯವಾಗುತ್ತಿದೆ. ದಿನವಿಡೀ ಆಫೀಸಿನಲ್ಲಿ ದುಡಿದು ಮನೆಗೆ ಹೊರಟ ಜನಕ್ಕೆ ಬೆಂಗಳೂರು ರಸ್ತೆಗಳು ಆಟ ಆಡಿಸಿವೆ. ಗಾಡಿಯಲ್ಲೇ ಕುಳಿತು ರೋಲರ್‌ ಕೋಸ್ಟರ್‌ ಅನುಭವ ಸಿಕ್ಕಿದೆ.

ಮಳೆ ಬೇಕಿತ್ತು ಆದರೆ ಇಷ್ಟೆಲ್ಲಾ ಬೇಡವಾಗಿತ್ತು ಎಂದು ಜನ ವರುಣದೇವನನ್ನು ಶಪಿಸುತ್ತಾ ಹೆಜ್ಜೆ ಹಾಕಿದ್ದಾರೆ. ಮಹದೇವಪುರದಿಂದ ಐದು ಗಂಟೆಗೆ ಹೊರಟಿದ್ದೆ. ವರ್ತೂರು ತಲುಪುವಷ್ಟರಲ್ಲಿ ರಾತ್ರಿ ಎಂಟು ಗಂಟೆಯಾಗಿತ್ತು. ಬರೀ ಹತ್ತು ಕಿಲೋಮೀಟರ್‌ ಹೋಗೋದಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾ? ಬೆಂಗಳೂರು ಜನ ಹೀಗೆ ಶಾಪ ಹಾಕೋದನ್ನು ನೋಡಿಯೇ ಮಳೆ ಕಡಿಮೆ ಬರುತ್ತದೆ ಎಂದು ಪ್ರಯಾಣಿಕರೊಬ್ಬರು ಗರಂ ಆಗಿದ್ದಾರೆ.

ಮಳೆ ಬರುವುದು ನಿಸರ್ಗದ ನಿಯಮ, ಆದರೆ ಹದಗೆಟ್ಟ ರಸ್ತೆಯನ್ನು ಸರಿಪಡಿಸುವುದು, ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ನಮ್ಮ ಜಿಬಿಎ ಕೆಲಸ. ಅವರು ಕೆಲವನ್ನು ಸರಿಯಾಗಿ ಮಾಡಿದ್ದಲ್ಲಿ ಮಳೆಯನ್ನು ಶಪಿಸುವ ಮಾತೇ ಬರುತ್ತಿರಲಿಲ್ಲ ಎಂದು ಪ್ರಯಾಣಿಕರು ಬೇಸರಿಸಿಕೊಂಡಿದ್ದಾರೆ.

ನಗರದಲ್ಲಿ ಮಿಂಚು-ಗುಡುಗು ಸಹಿತ ಮಳೆ ಸುರಿಯುತ್ತಿದೆ. ಜಿಟಿಜಿಟಿ ಮಳೆಯಿಂದಾಗಿ ವಾಹನ ಸವಾರರ ಪರದಾಡುವಂತಾಗಿದೆ. ಬೆಂಗಳೂರು ಉತ್ತರ ಭಾಗದಲ್ಲಿ ಜೋರು ಮಳೆಯಾಗಿದೆ. ಯಲಹಂಕ, ರಾಜಾನುಕುಂಟೆ, ಥಣಿಸಂದ್ರ, ಸಂಪಿಗೆಹಳ್ಳಿ ಸುತ್ತಮುತ್ತ ಜೋರು ಮಳೆ ಸುರಿದಿದೆ. ಮಳೆಯಿಂದಾಗಿ ರಸ್ತೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದೆ. ಜಕ್ಕೂರು ಬಳಿಯ ರೈಲ್ವೆ ಅಂಡರ್‌ಪಾಸ್ ಜಲಾವೃತಗೊಂಡಿದೆ. ಕೆಲವು ಕಡೆ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದೆ. ಮಳೆ ನೀರಿನಲ್ಲಿ ಕಾರುಗಳು ಸಹ ಮುಳುಗಿವೆ. ಇಂದು ಸಂಜೆಯೂ ಮಳೆಯಾಗುವ ಸಾಧ್ಯತೆ ಇದ್ದು, ಅದಕ್ಕೆ ತಕ್ಕಂತೆ ನಿಮ್ಮ ದಿನವನ್ನು ಪ್ಲಾನ್‌ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

Must Read