October 1, 2026
Thursday, October 1, 2026
spot_img

ಸೌಜನ್ಯ ಪ್ರಕರಣ: ಅಧಿಕೃತ ಮರುತನಿಖೆ ಆರಂಭಿಸಿದ ಎಸ್ಐಟಿ, ಮಂಗಳೂರಿನಲ್ಲಿ ಮೊದಲ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 2012ರಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ಸಾರಥ್ಯ ವಹಿಸಿಕೊಂಡಿರುವ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ತನಿಖೆ ಆರಂಭಿಸಿದೆ.

SIT ಮುಖ್ಯಸ್ಥ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಗುರುವಾರ ಮಂಗಳೂರಿನಲ್ಲಿ ಅಧಿಕಾರಿಗಳ ಮೊದಲ ಸಭೆ ನಡೆದಿದೆ, ಪ್ರಕರಣದ ಮುಂದಿನ ತನಿಖಾ ಹೆಜ್ಜೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಹಳೆ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿ SITಗಾಗಿ ಪ್ರತ್ಯೇಕ ಕಚೇರಿ ವ್ಯವಸ್ಥೆ ಮಾಡಲಾಗಿದೆ.

ಸಭೆಯಲ್ಲಿ ಡಿಐಜಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಎಸ್ಪಿ ಲೋಕೇಶ್ ಜಗಲಾಸರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಇದುವರೆಗೆ ನಡೆದ ತನಿಖೆಯ ದಾಖಲೆಗಳು, ಮುಂದಿನ ತನಿಖೆಯ ದಿಕ್ಕು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದರು.

ತನಿಖೆಗೆ ಅನುಕೂಲವಾಗುವಂತೆ ಬೆಳ್ತಂಗಡಿಯಲ್ಲೂ ಪ್ರತ್ಯೇಕ ಕಚೇರಿ ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ಏನಿದು ಸೌಜನ್ಯ ಪ್ರಕರಣ?

17 ವರ್ಷದ ಸೌಜನ್ಯ 2012ರ ಅ.9ರಂದು ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳ ಸಮೀಪ ನೇತ್ರಾವತಿ ನದಿ ಬಳಿಯ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು. ಅದಾದ ಬಳಿಕ ಸ್ಥಳೀಯ ಪೊಲೀಸರು, ಬಳಿಕ ಸಿಐಡಿ ಹಾಗೂ ಸಿಬಿಐ ಪ್ರಕರಣದ ತನಿಖೆ ನಡೆಸಿದ್ದವು.

ಇದೀಗ ಘಟನೆ ನಡೆದು ಸುಮಾರು 14 ವರ್ಷಗಳ ಬಳಿಕ ಮರು ತನಿಖೆ ಆರಂಭವಾಗಿದೆ. ಈ ಮರುತನಿಖೆಯಲ್ಲಿ ಹಳೆಯ ದಾಖಲೆಗಳು, ಸಾಕ್ಷ್ಯಗಳು ಹಾಗೂ ಲಭ್ಯವಿರುವ ಹೊಸ ಮಾಹಿತಿಯನ್ನು ಪರಿಶೀಲಿಸುವುದು ಪ್ರಮುಖವಾಗಲಿದೆ. ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಿ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳುವುದು SIT ಮುಂದಿರುವ ಪ್ರಮುಖ ಹೊಣೆಗಾರಿಕೆಯಾಗಿದೆ.

Must Read