October 1, 2026
Thursday, October 1, 2026
spot_img

ಹಬ್ಬದ ಸೀಸನ್‌ನಲ್ಲಿ ಸಕ್ಕರೆ ಕೃತಕ ಅಭಾವಕ್ಕೆ ಬ್ರೇಕ್: ದಾಸ್ತಾನು ಅವಧಿ, ಗರಿಷ್ಠ ಮಿತಿಯನ್ನು ಕಡಿತಗೊಳಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೀಪಾವಳಿ ಸೇರಿದಂತೆ ಮುಂಬರುವ ಸಾಲು ಸಾಲು ಹಬ್ಬಗಳ ದಿನಗಳಲ್ಲಿ ಸಕ್ಕರೆಯ ಅಕ್ರಮ ದಾಸ್ತಾನು ತಡೆಯಲು ಮತ್ತು ಗ್ರಾಹಕರಿಗೆ ನ್ಯಾಯೋಚಿತ ಬೆಲೆಯಲ್ಲಿ ಸಕ್ಕರೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರವು ದಾಸ್ತಾನು ನಿಯಮಗಳಲ್ಲಿ ಮಹತ್ವದ ಮಾರ್ಪಾಡು ಮಾಡಿದೆ.

ಹೊಸ ನಿಯಮದ ಪ್ರಕಾರ, ಸಕ್ಕರೆ ವ್ಯಾಪಾರಿಗಳು ಇನ್ಮುಂದೆ ಕೇವಲ 15 ದಿನಗಳ ಅವಧಿಗೆ ಮಾತ್ರ ಸಕ್ಕರೆಯನ್ನು ದಾಸ್ತಾನು ಇಟ್ಟುಕೊಳ್ಳಬಹುದಾಗಿದ್ದು, ಅದರ ಗರಿಷ್ಠ ಮಿತಿಯನ್ನು 1,000 ಕ್ವಿಂಟಾಲ್‌ಗೆ ಸೀಮಿತಗೊಳಿಸಲಾಗಿದೆ.

ಅಕ್ಟೋಬರ್ 15 ರಿಂದ ಜಾರಿ

ಸರ್ಕಾರದ ಈ ಪರಿಷ್ಕೃತ ನಿಯಮಗಳು ಇದೇ ಅ. 15 ರಿಂದ ನ. 30 ರವರೆಗೆ ಜಾರಿಯಲ್ಲಿರಲಿವೆ. ದೇಶದ ಬಹುತೇಕ ಭಾಗಗಳಲ್ಲಿ ಯಾವುದೇ ವ್ಯಾಪಾರಿ 1,000 ಕ್ವಿಂಟಾಲ್‌ಗಿಂತ ಹೆಚ್ಚು ಸಕ್ಕರೆಯನ್ನು ಸಂಗ್ರಹಿಸಿಡುವಂತಿಲ್ಲ. ಆದರೆ, ಕೊಲ್ಕತ್ತಾ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ಭಾಗದ ಪ್ರಮುಖ ನಗರಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದ್ದು, ಅಲ್ಲಿ 2,000 ಕ್ವಿಂಟಾಲ್‌ವರೆಗೆ ದಾಸ್ತಾನು ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.

ಕೃತಕ ಅಭಾವ ತಡೆಗೆ ಕ್ರಮ

ಮಾರುಕಟ್ಟೆಯಲ್ಲಿ ಸಕ್ಕರೆಯ ಕೃತಕ ಅಭಾವ ಸೃಷ್ಟಿಸಿ, ಬೆಲೆ ಏರಿಕೆ ಮಾಡುವ ಸಟ್ಟಾ ವ್ಯಾಪಾರಕ್ಕೆ ಬ್ರೇಕ್ ಹಾಕುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಸಕ್ಕರೆ ಗಿರಣಿಗಳಿಂದ ಡೀಲರ್‌ಗಳ ಮೂಲಕ ಗ್ರಾಹಕರಿಗೆ ಯಾವುದೇ ಅಡೆತಡೆಯಿಲ್ಲದೆ ಸಕ್ಕರೆ ಸರಬರಾಜು ಆಗುವುದನ್ನು ಇದು ಖಚಿತಪಡಿಸಲಿದೆ.

ಶೇ. 15 ರಷ್ಟು ಇಳಿಕೆ ಕಂಡ ಬೆಲೆ

ಆಗಸ್ಟ್ ತಿಂಗಳಲ್ಲಿ ಸಕ್ಕರೆ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಆದರೆ ಸರ್ಕಾರದ ನಿರಂತರ ನಿಗಾದಿಂದಾಗಿ ಸದ್ಯ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಶೇ. 15 ರಷ್ಟು ಮತ್ತು ಸಕ್ಕರೆ ಗಿರಣಿಗಳ  ಬೆಲೆಯಲ್ಲಿ ಶೇ. 28 ರಷ್ಟು ಇಳಿಕೆಯಾಗಿದೆ. ಈ ಬೆಲೆ ಇಳಿಕೆಯ ಲಾಭವನ್ನು ತಕ್ಷಣವೇ ಗ್ರಾಹಕರಿಗೆ ತಲುಪಿಸುವಂತೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸರ್ಕಾರ ಸೂಚಿಸಿದೆ.

ಕಬ್ಬು ನುರಿಸುವ ಹಂಗಾಮು ಆರಂಭ

ಹೊಸ ಸಕ್ಕರೆ ಉತ್ಪಾದನಾ ಹಂಗಾಮು ಆರಂಭವಾಗಿದ್ದು, ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಕಬ್ಬು ನುರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಸಕ್ಕರೆ ಗಿರಣಿಗಳಿಗೆ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಸಲಹೆ ನೀಡಿವೆ.

ದೇಶದಲ್ಲಿ ಕಬ್ಬು ಬೆಳೆಯುವ ರೈತರಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುವುದು ಎಷ್ಟು ಮುಖ್ಯವೋ, ಗ್ರಾಹಕರಿಗೆ ಹೊರೆಯಾಗದಂತೆ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯವಿರುವಂತೆ ಮಾಡುವುದು ಅಷ್ಟೇ ಮುಖ್ಯ ಎಂದು ಸರ್ಕಾರ ಪುನರುಚ್ಚರಿಸಿದೆ. ‘ಎಲ್ ನಿನೋ’ ಪ್ರಭಾವದಿಂದಾಗಿ ಕೆಲವು ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದ್ದು, ಕಬ್ಬಿನ ಇಳುವರಿ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read