ಹೊಸದಿಗಂತ ವರದಿ ಕಲಬುರಗಿ:
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರ ಭಾಷಣಕ್ಕೆ ಕಲಬುರಗಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಶ್ರೀಕಾಂತ್ ಶೆಟ್ಟಿ ಅವರ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ನಿರ್ಬಂಧ ಹೇರಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಶ್ರೀಕಾಂತ್ ಶೆಟ್ಟಿ ಅವರನ್ನು ರೌಡಿಶೀಟರ್ ಎಂದು ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಮಾತ್ರ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲಾಗದು. ಅವರು ರೌಡಿಶೀಟರ್ ಎಂಬುದು ಸಾಬೀತಾಗಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿದೆ ಎಂದು ತಿಳಿದುಬಂದಿದೆ.
ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಅರ್ಜಿದಾರ ಶ್ರೀಮಂತ ರಾಜು ನವಲದಿ ಅವರ ಪರವಾಗಿ ಹಿರಿಯ ವಕೀಲ ಶ್ರವಣಕುಮಾರ ಮಠ್ ವಾದ ಮಂಡಿಸಿದರು.
ನ್ಯಾಯಾಲಯದ ಷರತ್ತುಗಳಂತೆ ಅ.1ರಂದು ರಾತ್ರಿ 8.45ರೊಳಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಬೇಕು. ಅಲ್ಲದೆ, ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಭಾಷಣ ಮಾಡಬಾರದು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂತಹ ಯಾವುದೇ ಕೃತ್ಯಕ್ಕೆ ಅವಕಾಶ ನೀಡಬಾರದು ಎಂದು ಷರತ್ತು ವಿಧಿಸಲಾಗಿದೆ.
ಈ ಮೂಲಕ ಹಿಂದೂ ಮಹಾಗಣಪತಿ ಉತ್ಸವದ ವೇದಿಕೆಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರ ಭಾಷಣಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದು, ಕಾರ್ಯಕ್ರಮ ಆಯೋಜಕರು ಹಾಗೂ ಭಾಷಣಕಾರರು ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.



