ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಗುರುವಾರ ಮತ್ತೆ ಆರ್ಭಟಿಸಿದೆ.
ಗುರುವಾರ ಮಧ್ಯಾಹ್ನದಿಂದ ಜಿಲ್ಲೆಯ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸುಂಟಿಕೊಪ್ಪ, ಮೂರ್ನಾಡು, ನಾಪೋಕ್ಲ ಸೇರಿದಂತೆ ಹಲವು ಭಾಗಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ.
ಕುಶಾಲನಗರ ಸಮೀಪದ ಕೂಡಿಗೆ ಸುತ್ತಮುತ್ತ ಭಾರೀ ಗಾಳಿಯಿಂದ ಕೂಡಿದ ಮಳೆಯಾಗಿದ್ದು, ದಿಢೀರ್ ಸುರಿದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಲವು ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಮಳೆಯ ಅಬ್ಬರಕ್ಕೆ ಕೂಡಿಗೆ ವ್ಯಾಪ್ತಿಯಲ್ಲಿ ಹಲವು ಕಡೆ ಮರಗಳು ಧರೆಗೆ ಉರುಳಿವೆ. ಮರಗಳು ಬಿದ್ದ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ:
ಇನ್ನು ವೀರಾಜಪೇಟೆ, ಮೂರ್ನಾಡು, ಸುಂಟಿಕೊಪ್ಪ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಏಕಾಏಕಿ ಗುಡುಗು-ಸಿಡಿಲಿನೊಂದಿಗೆ ಮಳೆ ಸುರಿದಿದ್ದರಿಂದ ಜನರು ಕೆಲಕಾಲ ಆತಂಕಕ್ಕೊಳಗಾದರು.
ಮತ್ತೊಂದೆಡೆ, ಮಳೆಯ ಆಗಮನ ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಮಳೆ ಕೊರತೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತಂದಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಇನ್ನಷ್ಟು ಮಳೆಯಾಗುವ ನಿರೀಕ್ಷೆಯಿದೆ.



