ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಗಾಗಿ ಸಮಾಜವನ್ನು ಒಡೆಯುವ ಮತ್ತು ವಿಭಜಿಸುವ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆಯುತ್ತಿರುವೆ ಎನ್ನಲಾದ ಅಕ್ರಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡದ ಜಾಗದಲ್ಲಿ ಉರ್ದು ಹಬ್ಬ
ಕನ್ನಡ ಸಾರ್ವಭೌಮವಾಗಿ ರಾರಾಜಿಸಬೇಕಾದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ‘ಉರ್ದು ಹಬ್ಬ’ ಆಚರಿಸಲು ಮುಂದಾಗಿದೆ. ಇದು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಕೈಗೊಂಡಿರುವ ನಿರ್ಧಾರವಾಗಿದೆ ಎಂದು ಕಿಡಿಕಾರಿದ್ದಾರೆ.
ಭಾಷಾ ನೀತಿಯಲ್ಲಿ ಕಾಂಗ್ರೆಸ್ ದ್ವಂದ್ವ
ಕೇಂದ್ರ ಸರ್ಕಾರವು ಮೂರು ಭಾಷೆಗಳ ಸೂತ್ರವನ್ನು ಜಾರಿಗೆ ತರಲು ಪ್ರಸ್ತಾಪಿಸಿದಾಗ, ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸಿತ್ತು. ಆದರೆ ಇಂದು ಕನ್ನಡದ ಸ್ಥಾನದಲ್ಲಿ ಉರ್ದು ಹಬ್ಬ ಆಚರಿಸುವ ಮೂಲಕ ಕಾಂಗ್ರೆಸ್ ತನ್ನ ಅಸಲಿ ನಿಲುವನ್ನು ತಾನೇ ಬಯಲು ಮಾಡಿಕೊಂಡಿದೆ ಎಂದು ದೂರಿದರು.
ದೇಶವಿರೋಧಿ ಘೋಷಣೆ ಕೂಗಿದವರ ರಕ್ಷಣೆ
ವಿಧಾನಸೌಧದ ಒಳಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬದಲು, ಕಾಂಗ್ರೆಸ್ ಸರ್ಕಾರ ಅವರಿಗೆ ಪರೋಕ್ಷವಾಗಿ ರಕ್ಷಣೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮದ ಆರೋಪ
ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಅವಧಿಯಲ್ಲಿ ಮುಸ್ಲಿಂ ಮತದಾರರನ್ನು ಮಸೀದಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಒಟ್ಟುಗೂಡಿಸಿ, ಅಧಿಕಾರಿಗಳನ್ನೇ ಅಲ್ಲಿಗೆ ಕರೆಸಿಕೊಂಡು ಕಾನೂನುಬಾಹಿರವಾಗಿ ಹೆಸರುಗಳನ್ನು ಸೇರಿಸಲಾಗುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಸರುಗಳನ್ನೂ ಸೇರಿಸಲಾಗಿದ್ದು, ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕಳ್ಳ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಕೆಪಿಎಸ್‌ಸಿ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಆಗ್ರಹ
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಹಾಗೂ ಗೊಂದಲಗಳಿಂದಾಗಿ ಸರ್ಕಾರಿ ಉದ್ಯೋಗದ ಕನಸು ಹೊತ್ತ ಯುವಕರ ಶ್ರಮಕ್ಕೆ ಬೆಲೆ ಸಿಗದಂತಾಗಿದೆ. ಸಂಸ್ಥೆಯನ್ನು ಮುಚ್ಚುವುದು ಇದಕ್ಕೆ ಪರಿಹಾರವಲ್ಲ. ಬದಲಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತಂದು ಯುವಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡದೆ ಸಮಾಜವನ್ನು ಒಡೆಯುವ ರಾಜಕಾರಣವನ್ನು ಮುಂದುವರಿಸಿದರೆ, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.



