October 1, 2026
Thursday, October 1, 2026
spot_img

ದರ್ಶನ್ ಭೇಟಿಗೆ ಜೈಲಿಗೆ ಬಂದ ರಚಿತಾ ರಾಮ್: ಎರಡು ಗಂಟೆ ಕಾದರೂ ಸಿಗದ ‘ದಾಸ’ನ ದರುಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ನಟಿ ರಚಿತಾ ರಾಮ್ ಜೈಲು ಆವರಣಕ್ಕೆ ಆಗಮಿಸಿದ್ದರೂ, ಭೇಟಿಯಾಗದೆ ವಾಪಸ್ ತೆರಳಿದ್ದಾರೆ.

ದರ್ಶನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿ ಹಲವು ಗಂಟೆಗಳ ಕಾಲ ಕಾದರೂ, ಜೈಲು ಭೇಟಿಗೆ ಅವಕಾಶ ಸಿಗಲಿಲ್ಲ ಎಂದು ವರದಿಯಾಗಿದೆ.

ಭೇಟಿಗೆ ‘ನೋ’ ಎಂದ ದರ್ಶನ್

ರಚಿತಾ ರಾಮ್ ಜೈಲಿಗೆ ಆಗಮಿಸಿದ ಬಳಿಕ ನಿಯಮಾನುಸಾರ ಅಧಿಕಾರಿಗಳು ದರ್ಶನ್ ಅವರಿಗೆ ಭೇಟಿಯ ವಿಷಯವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್ ಹೊರಗಿನವರನ್ನು ಭೇಟಿಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಲಿಲ್ಲ. ದರ್ಶನ್ ಭೇಟಿಗೆ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ರಚಿತಾ ರಾಮ್ ಜೈಲು ಆವರಣದಲ್ಲಿ ಕೆಲಕಾಲ ಕಾದು ಬಳಿಕ ವಾಪಸ್ ತೆರಳಿದರು ಎಂದು ವರದಿಯಾಗಿದೆ.

ಪ್ರಸ್ತುತ ದರ್ಶನ್ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇತರರನ್ನು ಭೇಟಿಯಾಗಲು ಆಸಕ್ತಿ ತೋರುತ್ತಿಲ್ಲ ಎಂಬುದು ಜೈಲು ಮೂಲಗಳ ಹೇಳಿಕೆಯಾಗಿದೆ. ಪತ್ನಿ ವಿಜಯಲಕ್ಷ್ಮಿ, ಪುತ್ರ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಹೊರತುಪಡಿಸಿ ಚಿತ್ರರಂಗದ ಆಪ್ತರು ಅಥವಾ ಪರಿಚಿತರ ಭೇಟಿಗೂ ಅವರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಜೈಲು ಅಧಿಕಾರಿಗಳಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇದನ್ನೂ ಓದಿ:

ಪ್ರಾಸಿಕ್ಯೂಷನ್ ಸಾಕ್ಷಿಯಾದ ಪ್ರಧೋಷ್

ಪ್ರಕರಣದ 14ನೇ ಆರೋಪಿ ಪ್ರಧೋಷ್ ಎಸ್. ರಾವ್‌ಗೆ ಮಾಫಿ ನೀಡಿ, ಅವರನ್ನು ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಅನುಮತಿ ನೀಡಿದೆ. ಬಳಿಕ ಅವರು ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದಾರೆ.

ಪ್ರಧೋಷ್ ಅವರ ಸಾಕ್ಷ್ಯದಲ್ಲಿ ಪ್ರಕರಣದ ಇತರ ಆರೋಪಿಗಳ ಪಾತ್ರಕ್ಕೆ ಸಂಬಂಧಿಸಿದ ಮಾಹಿತಿ ಇರಬಹುದಾದ ಕಾರಣ, ಅವರ ಹೇಳಿಕೆ ವಿಚಾರಣೆಯಲ್ಲಿ ಗಮನ ಸೆಳೆದಿದೆ. ದರ್ಶನ್ ಪರ ವಕೀಲರು ಪ್ರಧೋಷ್ ಅವರನ್ನು ಮಾಫಿ ಸಾಕ್ಷಿಯಾಗಿಸುವ ಪ್ರಕ್ರಿಯೆಯನ್ನೇ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ದರ್ಶನ್ ಭೇಟಿಗೆ ರಚಿತಾ ರಾಮ್ ಬಂದಿರುವುದು ಚಿತ್ರರಂಗದಲ್ಲೂ ಗಮನ ಸೆಳೆದಿದೆ.

Must Read