October 1, 2026
Thursday, October 1, 2026
spot_img

ಅಗ್ನಿ ಅವಘಡ: ಮೃತ ಮನೀಶ್ ಕುಟುಂಬಕ್ಕೆ 1.20 ಕೋಟಿ ರೂ. ನೆರವು ಘೋಷಿಸಿದ MRPL

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಸಮೀಪದ ಎಂಆರ್‌ಪಿಎಲ್‌ನಲ್ಲಿ ಸೆ.30ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಒಟ್ಟು ಸುಮಾರು 1.20 ಕೋಟಿ ರೂ ಮೊತ್ತದ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯಗಳನ್ನು ಘೋಷಿಸಿದೆ. ಕಂಪನಿಯ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಣೀಶ್ ಮೃತಪಟ್ಟಿದ್ದರು.

20 ಲಕ್ಷ ವಿಮಾ ಪ್ರಯೋಜನ

ಕಂಪನಿ ಪ್ರಕಟಣೆಯ ಪ್ರಕಾರ, ಮೃತರ ಕುಟುಂಬಕ್ಕೆ MRPL ವತಿಯಿಂದ 90 ಲಕ್ಷ ರೂ ನೇರ ಆರ್ಥಿಕ ನೆರವು ನೀಡಲಾಗುವುದು. ಇದರೊಂದಿಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ (GTLI) ಅಡಿಯಲ್ಲಿ ಸುಮಾರು 10 ಲಕ್ಷ ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿಯಲ್ಲಿ 20 ಲಕ್ಷ ವಿಮಾ ಪ್ರಯೋಜನ ದೊರೆಯಲಿದೆ. ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿರುವ MRPL, ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದೆ.

ಮೆಡಿಕ್ಲೇಮ್ ವಿಮಾ ಸೌಲಭ್ಯ

ಇದೇ ವೇಳೆ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ದ್ವಿತೀಯ ಹಂತದ ಕಾರ್ಮಿಕರಿಗೂ ಮೆಡಿಕ್ಲೇಮ್ ವಿಮಾ ಸೌಲಭ್ಯ ಒದಗಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸುಮಾರು ನಾಲ್ಕು ವಾರಗಳೊಳಗೆ ಈ ವ್ಯವಸ್ಥೆ ಜಾರಿಗೆ ತರಲು MRPL ಉದ್ದೇಶಿಸಿದೆ.

ಇದನ್ನೂ ಓದಿ:

ಅಗ್ನಿ ಅವಘಡದ ಬಳಿಕ ಪರಿಹಾರ ಹಾಗೂ ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ MRPL ಕಚೇರಿ ಎದುರು ಪ್ರತಿಭಟನೆ ಕೂಡ ನಡೆಯಿತು. ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಎಲ್ಲ ಕಾರ್ಮಿಕರಿಗೂ ಸಮಗ್ರ ಆರೋಗ್ಯ ವಿಮೆ ನೀಡಬೇಕು ಎಂಬ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.

ಇದರ ನಡುವೆ, ಜಿಲ್ಲಾಡಳಿತದ ಪ್ರಾಥಮಿಕ ಅಂದಾಜಿನ ಪ್ರಕಾರ ಅಗ್ನಿ ಅವಘಡದಿಂದ 54 ಮನೆಗಳಿಗೆ ಹಾನಿಯಾಗಿದೆ. ಜೋಕಟ್ಟೆಯಲ್ಲಿ 25, ಕಳವಾರಿನಲ್ಲಿ 19 ಹಾಗೂ ಬಾಳದಲ್ಲಿ 10 ಮನೆಗಳು ಹಾನಿಗೊಳಗಾಗಿವೆ. ಎಂಟು ಧಾರ್ಮಿಕ ಸ್ಥಳಗಳಿಗೂ ಹಾನಿಯಾಗಿದ್ದು, ಜೋಕಟ್ಟೆಯಲ್ಲಿ ಐದು ಹಾಗೂ ಕಳವಾರಿನಲ್ಲಿ ಮೂರು ಸ್ಥಳಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಅವಘಡದಿಂದ ಉಂಟಾದ ನಷ್ಟದ ಸಂಪೂರ್ಣ ಅಂದಾಜು ಹಾಗೂ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಪ್ರಕ್ರಿಯೆ ಮುಂದುವರಿದಿದ್ದು, ಕಾರ್ಮಿಕರ ಸುರಕ್ಷತೆ ಮತ್ತು ಸಂತ್ರಸ್ತ ಕುಟುಂಬಗಳ ಪುನರ್ವಸತಿ ಇದೀಗ ಪ್ರಮುಖ ಆದ್ಯತೆಯಾಗಿದೆ.

Must Read