October 2, 2026
Friday, October 2, 2026
spot_img

ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆಯನ್ನಾಗಿಸಿದ್ದೀರಿ: ಕಾಂತಾರ ಚಾಪ್ಟರ್‌ 1 ಬಿಡುಗಡೆಯಾಗಿ ಒಂದು ವರ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಕಾಂತಾರಾ ಚಾಪ್ಟರ್‌ 1 ಸಿನಿಮಾಗೆ ಇಂದು ಒಂದು ವರ್ಷದ ಸಂಭ್ರಮ. 2025ರ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್‌ ಆಗಿದ್ದು, ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತ್ತು.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿ, ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ಚಾಪ್ಟರ್‌ 1 ಸಿನಿಮಾ ಒಟ್ಟಾರೆ 900 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಕರಾವಳಿಯ ದೈವಾರಾಧನೆ ಹಾಗೂ ಜಾನಪದ ಸಂಸ್ಕೃತಿಯ ಸಾರವನ್ನು ಅತ್ಯಂತ ಅದ್ದೂರಿಯಾಗಿ ತೆರೆಯ ಮೇಲೆ ತಂದಿದ್ದ ಚಿತ್ರಕ್ಕೆ ಜಗತ್ತಿನಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.

ಈ ಬಗ್ಗೆ ಹೊಂಬಾಳೆ ಫಿಲಂಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದು, ನಮ್ಮ ಸಿನಿಮಾಕ್ಕೆ ಒಂದು ವರ್ಷ ಕಳೆದರೂ ಆ ಅನುಭವ ಇನ್ನೂ ಹಸಿರಾಗಿದೆ. ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆನ್ನಾಗಿರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ಬಿಡುಗಡೆಯಾಗಿದ್ದರೂ, ಸಿನಿಮಾದ ಗುಂಗಿನಿಂದ ಪ್ರೇಕ್ಷಕರು ಇಂದಿಗೂ ಹೊರಬಂದಿಲ್ಲ. ಹಲವು ದಾಖಲೆಗಳನ್ನು ಬರೆದ ಈ ಚಿತ್ರ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಚಿತ್ರವನ್ನು ಜನರು ಈಗಲೂ ಒಟಿಟಿಯಲ್ಲಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

Must Read