October 2, 2026
Friday, October 2, 2026
spot_img

‘ನನ್ನ ಪತ್ರದ ಅರ್ಥವನ್ನು ತಿರುಚಲಾಗುತ್ತಿದೆ’: ಮತದಾರರ ಪಟ್ಟಿ ವಿವಾದದ ಕುರಿತು ಶಾಸಕ ಅಭಯ ಪಾಟೀಲ ಗರಂ

ಹೊಸದಿಗಂತ ವರದಿ ಬೆಳಗಾವಿ:

ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಾನು ತಪ್ಪೊಪ್ಪಿಕೊಂಡಿಲ್ಲ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆ ಯಾವುದೇ ಪತ್ರ ನೀಡಿಲ್ಲ. ತಮ್ಮ ಪತ್ರದ ಅರ್ಥವನ್ನು ತಿರುಚಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು.

ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

‘ಅಭಯ ಪಾಟೀಲ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ. ಆದರೆ, ನಾನು ಯಾವುದೇ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪೊಪ್ಪಿಕೊಂಡಿಲ್ಲ. ನೀಡದ ಹೇಳಿಕೆಯನ್ನು ನನ್ನ ಹೆಸರಿಗೆ ಸೇರಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಬೂತ್ ಮಟ್ಟದ ಪಕ್ಷದ ಏಜೆಂಟರು ನೀಡಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಅದನ್ನು ಪರಿಶೀಲಿಸಿ ಅಕ್ರಮ ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಮಾಹಿತಿ ಪರಿಶೀಲಿಸುವಂತೆ ಹೇಳುವುದಕ್ಕೂ, ಮತದಾರರ ಹೆಸರುಗಳನ್ನು ನೇರವಾಗಿ ಅಳಿಸುವಂತೆ ಸೂಚಿಸುವುದಕ್ಕೂ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದರು.

ಬಿಎಲ್‌ಎ–2ಗಳು ಸಲ್ಲಿಸಿದ ಮಾಹಿತಿಯನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತರು ನೀಡಿದ್ದಾರೆ ಪಟ್ಟಿಯೆಂದು ಬಿಂಬಿಸಲಾಗುತ್ತಿದೆ. ಮತದಾರರ ಅರ್ಹತೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆ ಎಂದು ಹೇಳಿದರು.

ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ಅವರು, ‘ನಮ್ಮವರು ಎಲ್ಲ ಸಮುದಾಯದ ಮನೆಗಳಿಗೂ ಭೇಟಿ ನೀಡಿದ್ದಾರೆ. ಒಂದೇ ವಿಳಾಸದಲ್ಲಿ ಹೆಚ್ಚಿನ ಮತದಾರರ ಹೆಸರುಗಳಿದ್ದು, ಸ್ಥಳಕ್ಕೆ ಭೇಟಿ ನೀಡಿದಾಗ ಅಷ್ಟು ಜನರು ಕಂಡುಬರದಿದ್ದರೆ ಅನುಮಾನ ವ್ಯಕ್ತಪಡಿಸಿ ಪರಿಶೀಲನೆಗೆ ಕೋರಲಾಗಿದೆ. ಇದಕ್ಕೆ ಸಮುದಾಯದ ಬಣ್ಣ ಹಚ್ಚುವುದು ಸರಿಯಲ್ಲ’ ಎಂದರು.

ಇದನ್ನೂ ಓದಿ:

ಆಕ್ಷೇಪಣೆ ಸಲ್ಲಿಕೆಯ ವಿಧಾನ ಹಾಗೂ ಸಂಖ್ಯಾಮಿತಿಯ ಕುರಿತು ಪ್ರಶ್ನಿಸಿದಾಗ, ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಬೇಕು. ಅನುಮತಿಗಿಂತ ಹೆಚ್ಚಿನ ಅರ್ಜಿಗಳಿದ್ದರೆ ನಿಯಮದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪರಿಶೀಲಿಸುವ ಬದಲು ಬಿಜೆಪಿ ವಿರುದ್ಧ ಆರೋಪ ಮಾಡಿ ರಾಜಕೀಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ದೂರಿದ ಅವರು, ಅರ್ಹ ಮತದಾರರ ಹೆಸರುಗಳು ಉಳಿಯಬೇಕು ಹಾಗೂ ಅಕ್ರಮ ನಮೂದುಗಳಿದ್ದರೆ ಪರಿಶೀಲನೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Must Read