ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಿ ಬದಲಾಗಿರುವ 14ನೇ ಆರೋಪಿ ಪ್ರದೋಷ್ ರಾವ್ ತಪ್ಪೊಪ್ಪಿಗೆ ನೀಡಿದ್ದಾರೆ. ಇದು ಡಿ ಗ್ಯಾಂಗ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ದರ್ಶನ್ ರೇಣುಕಾಸ್ವಾಮಿಯ ಕೊಲೆಯನ್ನು ಮುಚ್ಚಿಹಾಕಿ ಬೇರೆ ವ್ಯಕ್ತಿಗಳಿಗೆ ತಾವೇ ಕೊಲೆ ಮಾಡಿದ್ದೇವೆ ಎಂದು ಹೇಳಲು ತಲಾ ಹತ್ತು ಲಕ್ಷ ರೂಪಾಯಿ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ನಂತರ ಆತ ಮೃತಪಟ್ಟಿದ್ದಾನೆ ಎನ್ನುವ ವಿಚಾರವನ್ನು ನಾನು ಆರ್ಆರ್ನಗರದಲ್ಲಿದ್ದ ದರ್ಶನ್ ಅವರಿಗೆ ಹೇಳಿದೆ. ತುಂಬಾ ಟೆನ್ಷನ್ ಮಾಡಿಕೊಂಡಿದ್ದರು. ನಾನು ರಿವಾಲ್ವರ್ನಲ್ಲಿ ಶೂಟ್ ಮಾಡಿಕೊಂಡು ಬಿಡುತ್ತೇನೆ ಎಂದು ಹೇಳಿದ್ದರು. ಆನಂತರ ಹುಡುಗರಿಗೆ ಹಣ ಕೊಟ್ಟು ಕೊಲೆ ಆರೋಪವನ್ನು ಹೊರಲು ಹೇಳಿದರು. ಆರೋಪಿ ವಿನಯ್ ಹಾಗೂ ರಾಘವೇಂದ್ರ ಕೊಲೆ ಮಾಡಿದ್ದೇವೆಂದು ಒಪ್ಪಿಕೊಳ್ಳಲು ತಯಾರಾದರು. ಅವರಿಗೆ ಹತ್ತು ಲಕ್ಷ ರೂಪಾಯಿ ನೀಡಲಾಗಿತ್ತು ಎಂದಿದ್ದಾರೆ.
ಅವರು ಹಣ ಪಡೆದು ಸಾಕ್ಷಿ ಹೇಳುವಾಗ ಉಲ್ಟಾ ಹೊಡೆದರೆ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ದರ್ಶನ್ ಹೇಳಿದ್ದರು. ರೇಣುಕಾಸ್ವಾಮಿಯ ಮೃತದೇಹವನ್ನು ಎಸೆಯಲು ದೊಡ್ಡ ಮೋರಿಯನ್ನು ನೋಡಿ ಬಂದಿದ್ದರು ಅಲ್ಲಿಗೆ ಮೃತದೇಹವನ್ನು ಎಸೆಯಲಾಗಿತ್ತು ಎಂದು ಹೇಳಿದ್ದಾರೆ.



