October 2, 2026
Friday, October 2, 2026
spot_img

ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ: ಬೆಳಗಾವಿಯಲ್ಲಿ ಬೈಕ್ ಸವಾರ ಸಾ*ವು

ಹೊಸದಿಗಂತ ವರದಿ ಬೆಳಗಾವಿ:

ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ನಗರದ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ನಡೆದಿದೆ.

ಮೃತರನ್ನು ಬೆಳಗಾವಿಯ ಮಹಾಂತೇಶ ನಗರದ ನಿವಾಸಿ ದೃವಾ ಕರ್ಜಗಿ (19) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ನಿಯಂತ್ರಣ ತಪ್ಪಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾಂಜಾ ದಾರದ ಬಳಕೆ ಹಾಗೂ ಮಾರಾಟಕ್ಕೆ ನಿಷೇಧವಿದ್ದರೂ, ನಗರದಲ್ಲಿ ಅದರ ಮಾರಾಟ ನಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ದಾರಗಳಿಂದ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Must Read