ಹೊಸದಿಗಂತ ವರದಿ ಮುಂಡಗೋಡ:
ತಾಲೂಕಿನ ಕಾತೂರ ವಲಯದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಡಂಚಿನ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದರ ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲೂ ಆನೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಗ್ರಾಮಸ್ಥರು ಹಾಗೂ ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
ತಾಲೂಕಿನ ರಾಮಾಪುರ, ಅಟ್ಟಣಗಿ, ಹಳ್ಳದಮನೆ, ಜೋಡಿಕಟ್ಟಾ ಹಾಗೂ ಕೋಡಂಬಿ ಗ್ರಾಮಗಳ ಸಮೀಪದಲ್ಲೇ ಕಾಡಾನೆಗಳ ಹಿಂಡು ಸಂಚರಿಸುತ್ತಿವೆ. ರಸ್ತೆ ಪಕ್ಕದಲ್ಲೇ ಆನೆಗಳು ಕಾಣಿಸಿಕೊಳ್ಳುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಹಿಂಡು ಹಿಂಡಾಗಿ ದಾಳಿ ನಡೆಸುತ್ತಿರುವ ಕಾಡಾನೆಗಳು ರೈತರ ಗದ್ದೆಗಳಿಗೆ ಲಗ್ಗೆ ಇಟ್ಟು ಕಟಾವಿಗೆ ಬಂದ ಭತ್ತದ ಫಸಲನ್ನು ತಿಂದು ಹಾಗೂ ತುಳಿದು ಹಾಳುಮಾಡುತ್ತಿವೆ. ಅಲ್ಲದೆ, ತೋಟಗಳಿಗೂ ನುಗ್ಗಿ ಬಾಳೆ ಮತ್ತು ಅಡಿಕೆ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟುಮಾಡುತ್ತಿರುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ.
ಇದನ್ನೂ ಓದಿ:
ಹಿಂದಿನ ವರ್ಷಕ್ಕಿಂತ ಹೆಚ್ಚಿದ ಹಾವಳಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಡಾನೆಗಳ ಉಪಟಳ ಹಾಗೂ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ ಎಂದು ರಾಮಾಪುರ, ಅಟ್ಟಣಗಿ, ಹಳ್ಳದಮನೆ, ಜೋಡಿಕಟ್ಟಾ ಮತ್ತು ಕೋಡಂಬಿ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ. ನಿತ್ಯವೂ ಬೆಳೆ ಕೈತಪ್ಪುವ ಭೀತಿ ಹಾಗೂ ಪ್ರಾಣಭಯದ ನಡುವೆಯೇ ಜಮೀನುಗಳಿಗೆ ತೆರಳಬೇಕಾದ ಸ್ಥಿತಿ ಎದುರಾಗಿದ್ದು, ಅರಣ್ಯ ಇಲಾಖೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಆನೆಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.



