November 22, 2026
Sunday, November 22, 2026
spot_img

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಅದ್ಧೂರಿ ಆರತಕ್ಷತೆ: ಚೆನ್ನೈಗೆ ಬಂದಿಳಿದ ತಾರೆಯರ ದಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸಹ-ಮಾಲೀಕರು ಹಾಗೂ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ಇಂದು (ನ. 21) ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.‌

ನವೆಂಬರ್ 10ರಿಂದ ಪ್ರಾರಂಭವಾದ ವಿವಾಹ ಸಂಭ್ರಮಾಚರಣೆಗಳ ಬಳಿಕ, ನವೆಂಬರ್ 11ರಂದು ಗ್ರೀಸ್‌ನಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ ಚೆನ್ನೈನಲ್ಲಿ ಗಣ್ಯರಿಗಾಗಿ ಭವ್ಯ ಆರತಕ್ಷತೆ ಏರ್ಪಡಿಸಲಾಗಿದೆ.

ಸಮಾರಂಭಕ್ಕೂ ಮುನ್ನ ಅನಿರುದ್ಧ್ ಅವರು ಪತ್ನಿ ಕಾವ್ಯಾ ಅವರೊಂದಿಗಿನ ಸಂಭ್ರಮದ ಹೊಸ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಎಂ.ಕೆ. ಸ್ಟಾಲಿನ್ ಹಾಗೂ ಕಾವ್ಯಾ ಅವರ ತಂದೆ, ಸನ್ ಟಿವಿ ನೆಟ್‌ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರೊಂದಿಗಿನ ಸುಂದರ ಕ್ಷಣಗಳು ಸೆರೆಯಾಗಿವೆ.

ಗಣ್ಯರ ಆಗಮನ

ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ನಡೆಯುತ್ತಿರುವ ಈ ತಾರಾಬಳಗದ ಸಂಭ್ರಮದಲ್ಲಿ ಈಗಾಗಲೇ ರಾಜಕೀಯ, ಸಿನಿಮಾ ಹಾಗೂ ಕ್ರಿಕೆಟ್ ಲೋಕದ ಹಲವು ದಿಗ್ಗಜರು ಪಾಲ್ಗೊಂಡು ನವದಂಪತಿಗೆ ಆಶೀರ್ವದಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಕೇರಳ ಸಿಎಂ ವಿ.ಡಿ. ಸತೀಶನ್ ಅವರು ಸಮಾರಂಭಕ್ಕೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಅದೇ ರೀತಿ ಸೂಪರ್ ಸ್ಟಾರ್ ರಜನಿಕಾಂತ್, ಲೋಕನಾಯಕ ಕಮಲ್ ಹಾಸನ್, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ತಾರಾ ದಂಪತಿಗಳಾದ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

https://twitter.com/diganta_guha/status/2124150862792773869

ಇನ್ನು, ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರರು ಹಾಗೂ ಕೋಚ್‌ಗಳಾದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಡೇಲ್ ಸ್ಟೇನ್, ಭುವನೇಶ್ವರ್ ಕುಮಾರ್ ಮತ್ತು ಮುತ್ತಯ್ಯ ಮುರಳೀಧರನ್ ಅವರು ಆರತಕ್ಷತೆಗೆ ಆಗಮಿಸಿ ಸಂಭ್ರಮಕ್ಕೆ ಮೆರುಗು ನೀಡಿದ್ದಾರೆ.

2025 ಮತ್ತು 2026ರ ಉದ್ದಕ್ಕೂ ಇವರಿಬ್ಬರ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಅನಿರುದ್ಧ್ ಅವರ ಮಾವ ವೈ.ಜಿ. ಮಹೇಂದ್ರನ್ ಅವರ ಮಾತುಗಳು ಹಾಗೂ ಅಕ್ಟೋಬರ್ ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ನವೆಂಬರ್ 21ರ ಆರತಕ್ಷತೆಯ ಬಗ್ಗೆ ಸುಳಿವು ನೀಡಿದ ಬಳಿಕ ಈ ವಿವಾಹದ ಸುದ್ದಿ ಅಧಿಕೃತಗೊಂಡಿತ್ತು.

ಸದ್ಯ ಕಾವ್ಯಾ ಮಾರನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡ ಹಾಗೂ ಸನ್ ಟಿವಿ ನೆಟ್‌ವರ್ಕ್ ಜವಾಬ್ದಾರಿಗಳನ್ನು ಮುನ್ನಡೆಸುತ್ತಿದ್ದರೆ, ಇತ್ತೀಚೆಗಷ್ಟೇ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದ ಸಂಗೀತದ ಮೂಲಕ ಗಮನ ಸೆಳೆದಿದ್ದ ಅನಿರುದ್ಧ್, ವಿವಾಹದ ಹಿನ್ನೆಲೆಯಲ್ಲಿ ಸಣ್ಣ ವಿರಾಮ ಪಡೆದಿದ್ದು 2027ರ ಜನವರಿಯಲ್ಲಿ ಮತ್ತೆ ಕೆಲಸಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

Must Read