ಹೊಸದಿಗಂತ ವರದಿ ಬೆಳಗಾವಿ:
ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮತ್ತು ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ)ಗೆ ಯಾವುದೇ ಸಂಬಂಧವಿಲ್ಲ. ಎಂಎಸ್‌ಪಿ ಎಂದರೆ ‘ಮಿನಿಮಮ್ ಸೆಲ್ಲಿಂಗ್ ಪ್ರೈಸ್’ ಎಂಬ ತಪ್ಪು ಅಭಿಪ್ರಾಯವಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಬೆಳಗಾವಿ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧವಾಗಿದೆ. 2014ಕ್ಕೂ ಮುನ್ನ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿಯಾಗಲು ವಿಳಂಬವಾಗುತ್ತಿತ್ತು. ಕೇಂದ್ರ ಸರ್ಕಾರ ಹಲವು ಕ್ರಮಗಳ ಮೂಲಕ ಬಾಕಿ ಹಣ ಪಾವತಿಗೆ ವ್ಯವಸ್ಥೆ ಮಾಡಿದ್ದು, ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದಿದೆ ಎಂದರು.

ಕಬ್ಬಿನ ಎಫ್‌ಆರ್‌ಪಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲತೆಗೆ ಎಥೆನಾಲ್ ಉತ್ಪಾದನೆಗೂ ಉತ್ತೇಜನ ನೀಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಹಣ ಪಾವತಿ ತ್ವರಿತಗೊಳ್ಳುತ್ತಿದೆ ಎಂದು ಹೇಳಿದರು.
ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಅಕ್ಟೋಬರ್ 12ರಂದು ಕೇಂದ್ರ ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ, ರೈತ ಮುಖಂಡರು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಯುವ ನಿರೀಕ್ಷೆಯಿದೆ. ರೈತರು ಪ್ರತಿಭಟನೆ ನಡೆಸುವ ಬದಲು ದೆಹಲಿಗೆ ಆಗಮಿಸಿ ಮುಕ್ತ ಚರ್ಚೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕಡಾಡಿ ಹೇಳಿದರು.
ಇದನ್ನೂ ಓದಿ:
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ದರ ಹೆಚ್ಚಿಸಿರುವುದನ್ನು ಟೀಕಿಸಿದ ಅವರು, ಕರ್ನಾಟಕದಲ್ಲೂ ಎಫ್‌ಆರ್‌ಪಿ ಜೊತೆಗೆ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.



